ಸುರತ್ಕಲ್ ಟೋಲ್‌ಗೇಟ್ ಹೋರಾಟಗಾರರ ಮನೆಗಳಿಗೆ ತಡರಾತ್ರಿ ಪೊಲೀಸರು ಭೇಟಿ: ಹಲವು ಮುಖಂಡರಿಗೆ ನೋಟಿಸ್

ಸುರತ್ಕಲ್ ಟೋಲ್ ಗೇಟ್ ಹೋರಾಟಗಾರರ ಮನೆಗಳಿಗೆ ಪೊಲೀಸರು ಭೇಟಿ ನೀಡಿ ನೋಟಿಸ್ ನೀಡಿರುವ ಘಟನೆ ಶನಿವಾರ ತಡರಾತ್ರಿ ನಡೆದಿದೆ. ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ, ಬಿ.ಕೆ. ಇಮ್ತಿಯಾಝ್, ಪ್ರತಿಭಾ ಕುಳಾಯಿ, ರಾಘವೇಂದ್ರ ರಾವ್ ಸೇರಿದಂತೆ ಹಲವು ಮುಖಂಡರಿಗೆ ಸುರತ್ಕಲ್ ಪೊಲೀಸರು ನೋಟಿಸ್ ನೀಡಿದ್ದಾರೆ.

ನೋಟಿಸ್‌ನಲ್ಲಿ ಈಗಾಗಲೇ ಸಭೆ ನಡೆಸಿ ಹೋರಾಟ ಹಿಂಪಡೆಯುವಂತೆ ಸೂಚಿಸಲಾಗಿತ್ತು. ಆದರೆ, ಅದನ್ನು ಹೋರಾಟ ಸಮಿತಿ ತಿರಸ್ಕರಿಸಿದೆ. ಹಾಗಾಗಿ ನೋಟಿಸ್ ತಲುಪಿದ ಕೂಡಲೇ ಡಿಸಿಪಿ ಅವರ ಕಚೇರಿಗೆ ಭೇಡಿ ನೀಡಿ ಹೋರಾಟ ಮುಂದುವರಿಸುವುದಿಲ್ಲ ಎಂದು ಮುಚ್ಚಳಿಗೆ ಬರೆದು ಕೊಡುವಂತೆ ಹೇಳಲಾಗಿದೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರತಿಭಾ ಕುಳಾಯಿ ಅವರು, ಬಿಜೆಪಿ ಶಾಸಕರು, ಸಂಸದರು ಸುರತ್ಕಲ್ ಟೋಲ್‌ಗೇಟ್ ವಿಚಾರದಲ್ಲಿ ಮಾನಸಿಕ ಸ್ವಾಸ್ಥ್ಯ ಕಳೆದುಕೊಂಡಂತಿದೆ. ಅ.೧೮ರ ಟೋಲ್ ಗೇಟ್ ಹೋರಾಟವನ್ನು ಹತ್ತಿಕ್ಕಲು ನನ್ನ ಮನೆಗೆ ಮಧ್ಯರಾತ್ರಿ ಪೊಲೀಸರನ್ನು ಕಳುಹಿಸಿ ನೋಟಿಸ್ ನೀಡಿರುವ ಜಿಲ್ಲಾಡಳಿತಕ್ಕೆ ನಾಚಿಕೆಯಾಗಬೇಕು. ನಾನೊಬ್ಬ ಸಾಮಾಜಿಕ ಕಾರ್ಯಕರ್ತೆಯೇ ಹೊರತು ಉಗ್ರಗಾಮಿ ಅಲ್ಲ ಎಂದು ಹೇಳಿದರು.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ, ಮಧ್ಯರಾತ್ರಿ ಪೊಲೀಸರನ್ನು ಹೋರಾಟಗಾರರ ಮನೆಗಳಿಗೆ ಕಳುಹಿಸುತ್ತೀರಾ ಅದಕ್ಕೆಲ್ಲ ಜನ ಹೆದರುವ ಕಾಲ ಮುಗಿದಿದೆ. ತುಳುನಾಡಿನ ಮುಂದೆ ಬೆತ್ತಲಾಗುತ್ತಿದ್ದೀರಿ ಬಿಜೆಪಿಗರೆ ಎಚ್ಚರ” ಎಂದು ಹೇಳಿದ್ದಾರೆ.