ಯುವ ಜನತೆಗೆ ವಿವೇಕಾನಂದರ ಕರೆ

- ಯಾರಿಗೆ ತನ್ನಲ್ಲಿ ತನಗೆ ನಂಬಿಕೆಯಿಲ್ಲವೋ ಅವನು ನಾಸ್ತಿಕ. ಹಳೆಯ ಧರ್ಮಗಳು ಹೇಳಿದವು, ದೇವರನ್ನು ನಂಬದವನು ನಾಸ್ತಿಕ ಎಂದು. ಹೊಸ ಧರ್ಮವು ಹೇಳುತ್ತದೆ, ಯಾರಿಗೆ ತನ್ನಲ್ಲಿ ನಂಬಿಕೆಯಿಲ್ಲವೊ ಅವನು ನಾಸ್ತಿಕ ಎಂದು.
- ನಿಮ್ಮ ನಂಬಿಕೆಯಂತೆ ನೀವಾಗುತ್ತೀರಿ. ನಿಮ್ಮನ್ನು ನೀವು ಋಷಿಗಳೆಂದು ನಂಬಿದರೆ ನೀವು ನಾಳೆ ಋಷಿಗಳೇ ಆಗುತ್ತೀರಿ.
- ಶೈವಾವಸ್ಥೆಯಿಂದಲೇ ಮಕ್ಕಳು ಶಕ್ತಿ ಶಾಲಿಗಳಾಗುವಂತೆ ಮಾಡಿ. ಅವರಿಗೆ ದುರ್ಬಲತೆಯನ್ನಾಗಲಿ, ಮೂಢ ಆಚರಣೆಗಳನ್ನಾಗಲಿ ಬೋಧಿಸಬೇಡಿ. ಅವರನ್ನು ಶಕ್ತಿವಂತರನ್ನಾಗಿ ಮಾಡಿ.
- ಶಕ್ತಿಶಾಲಿಗಳಾಗಿ, ಶ್ರದ್ಧಾವಂತರಾಗಿ. ಆಗ ಎಲ್ಲವೂ ನಿಶ್ಚಿತವಾಗಿ ಸಾಧಿಸಲ್ಪಡುತ್ತದೆ.
- ಶಕ್ತಿಯೆಲ್ಲ ನಿಮ್ಮೊಳಗೇ ಇದೆ ; ನೀವು ಏನು ಬೇಕಾದರೂ ಮಾಡಬಲ್ಲಿರಿ, ಎಲ್ಲವನ್ನೂ ಮಾಡಬಲ್ಲಿರಿ.
- ನೀವು ಯಶಸ್ಸನ್ನು ಪಡೆಯಲು ಧೃಢ ಪ್ರಯತ್ನ ಮಾಡಬೇಕು, ಅಪಾರ ಇಚ್ಛಾಶಕ್ತಿ ಬೇಕು. ನಾನು ಸಮುದ್ರವನ್ನೇ ಪಾನ ಮಾಡುತ್ತೇನೆ ಎಂದು ಪ್ರಯತ್ನಶೀಲನು ಹೇಳುತ್ತಾನೆ. ನನ್ನ ಸಂಕಲ್ಪದ ಮುಂದೆ ಪರ್ವತಗಳೇ ಪುಡಿಪುಡಿಯಾಗುತ್ತವೆ ಎನ್ನುತ್ತಾನವನು. ಇಂತಹ ಶಕ್ತಿಯನ್ನು, ಗಟ್ಟಿ ಗುಂಡಿಗೆಯನ್ನು ಪಡೆಯಿರಿ. ಕಷ್ಟಪಟ್ಟು ದುಡಿಯಿರಿ, ನೀವು ಗುರಿ ಸೇರುವುದು ನಿಶ್ಚಯ.
- ಸ್ವಾರ್ಥವೇ ಅಧರ್ಮ ; ನಿ:ಸ್ವಾರ್ಥವೇ ಧರ್ಮ. ಹೆಚ್ಚು ನಿ:ಸ್ವಾರ್ಥಿಯಾದವನೇ ಧರ್ಮಿಷ್ಟ ಮತ್ತು ಶಿವನಿಗೆ ಹತ್ತಿರ. ನಿಜವಾಗಿಯೂ ಜೀವನ ಸೇವೆಯೇ ಶಿವನ ಸೇವೆ.
- ಸ್ವಾರ್ಥತೆಯೇ ಪ್ರತಿಯೊಬ್ಬನಲ್ಲಿಯೂ ಇರುವ ಪ್ರತ್ಯಕ್ಷ ರಾಕ್ಷಸ. ಪ್ರತಿಯೊಂದು ಬಗೆಯ ಸ್ವಾರ್ಥವೂ ಸೈತಾನನೇ.
- ಪ್ರತಿಯಾಗಿ ಏನನ್ನೂ ಬಯಸಬೇಡಿ. ಆದರೆ ನೀವು ಹೆಚ್ಚು ಕೊಟ್ಟಷ್ಟು ನಿಮಗೆ ಹೆಚ್ಚು ಬರುತ್ತದೆ.
- ವಿಕಾಸವೇ ಜೀವನ ; ಸಂಕೋಚವೇ ಮರಣ. ಪ್ರೇಮವೆಲ್ಲಾ ವಿಕಾಸ ; ಸ್ವಾರ್ಥವೆಲ್ಲಾ ಸಂಕೋಚ ; ಆದುದರಿಂದ ಪ್ರೇಮವೇ ಬದುಕಿನ ಧರ್ಮ.
