ಮಗುವಿನ ನೆರವಿಗೆ ನಿಂತ ಉಳ್ಳಾಲದ ಟೀಂ ಹನುಮಾನ್
ಉಳ್ಳಾಲ: ಐದು ವರ್ಷದ ಹಿಂದೆ ಸಮಾಜಮುಖಿ ಕಾರ್ಯಗಳಿಗೆ ವೇದಿಕೆಯಾಗಿ ಸ್ಥಾಪನೆಗೊಂಡ ಉಳ್ಳಾಲದ ಟೀಂ ಹನುಮಾನ್ 20 ಮಂದಿ ಯುವಕರ ತಂಡ ಉಳ್ಳಾಲದಲ್ಲಿ ಇತ್ತೀಚೆಗೆ ನಡೆದ ದಸರಾ ಉತ್ಸವದ ವೇಳೆ ವಿವಿಧ ರೀತಿಯ ವೇಷ ಧರಿಸಿ ಜನರಿಂದ ಸಂಗ್ರಹಿಸಿದ ಹಣವನ್ನು ರಕ್ತದ ಕ್ಯಾನ್ಸರಿನಿಂದ ಬಳಲುತ್ತಿರುವ ಒಂದೂವರೆ ವರ್ಷದ ಮಗುವಿನ ಚಿಕಿತ್ಸೆಗೆ ನೀಡಿ ಮಾದರಿಯಾಗಿದ್ದಾರೆ.
ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೂಡಬಿದ್ರೆಯ ಒಂದೂವರೆ ವರ್ಷದ ಶ್ರೀಯಾ ಹೆಸರಿನ ಮಗುವಿನ ಚಿಕಿತ್ಸೆಗೆ ತಂಡ ಸಂಗ್ರಹಿಸಿದ ರೂ. 1,28,479 ಚೆಕ್ ಅನ್ನು ವಿತರಿಸಿದ್ದಾರೆ. ಉಳ್ಳಾಲ ಪೆÇಲೀಸ್ ಠಾಣೆಯ ಎಸ್.ಐ ಶಿವಕುಮಾರ್ ನೇತೃತ್ವದಲ್ಲಿ ಚೆಕ್ ಅನ್ನು ಹೆತ್ತವರಿಗೆ ಸೋಮವಾರ ವಿತರಿಸಲಾಯಿತು. ಸಾಮಾಜಿಕ ಜಾಲತಾಣಗಳಲ್ಲಿ ಮಗುವಿನ ಚಿಕಿತ್ಸೆಗಾಗಿ ದಾನಿಗಳ ನೆರವು ಕೋರಿದ ಚಿತ್ರವೊಂದು ಸಿಕ್ಕಿತ್ತು. ಈ ಕುರಿತು ತಂಡದ ಸದಸ್ಯರು ಬೇಸರ ವ್ಯಕ್ತಪಡಿಸಿ, ತಮ್ಮ ಕೈಯಿಂದ ಆಗುವ ಸಹಾಯದ ಕುರಿತು ಚರ್ಚಿಸಿದ್ದರು. ಆದರೆ ಸಂಘದಲ್ಲಿ ಅಷ್ಟೊಂದು ಮೊತ್ತ ಇಲ್ಲದೇ ಇದ್ದ ಕಾರಣಕ್ಕಾಗಿ ಸಂಘದ ಗೌರವ ಸಲಹೆಗಾರ ಪ್ರಭಾಕರ್ ಶೆಟ್ಟಿಯವರ ಸಲಹೆಯಂತೆ ದಸರಾ ಸಂದರ್ಭ ವೇಷ ಧರಿಸುತ್ತಾ ಹಾಗೂ ಡಬ್ಬಿಯನ್ನು ಹಿಡಿದುಕೊಂಡು ಹಣ ಸಂಗ್ರಹಿಸುವ ನಿರ್ಧಾರವನ್ನು ಕೈಗೊಳ್ಳಲಾಗಿತ್ತು. ಇದಕ್ಕೆ ಪೂರಕವಾಗಿ ತಂಡದಲ್ಲಿರುವ ವಿದ್ಯಾರ್ಥಿ ಸದಸ್ಯರು ಹಾಗೂ ಕೆಲಸಕ್ಕೆ ಹೋಗುವ ಯುವಕರು ತಮ್ಮದೇ ಖರ್ಚಿನಲ್ಲಿ ವಿವಿಧ ಬಗೆಯ ವಿಭಿನ್ನ ಶೈಲಿಯ ವೇಷ ಸಿದ್ಧಪಡಿಸಿ, ಟ್ಯಾಬ್ಲೋ ರಚಿಸಿ ಅದರಲ್ಲಿ ಪ್ರದರ್ಶನ ನೀಡಿ ದಸರಾ ಉತ್ಸವದಲ್ಲಿ ಹಣ ಸಂಗ್ರಹಿಸಲು ಆರಂಭಿಸಿದರು. ಜೊತೆಗೆ ದಾನಿಗಳಿಂದಲೂ ಹಣವನ್ನು ಸಂಗ್ರಹಿಸಿದ್ದಾರೆ.
ಒಂದು ದಿನದಲ್ಲಿ ಒಟ್ಟು ರೂ. 1,28,479 ನ್ನು ತಂಡ ಸಂಗ್ರಹಿಸಿದೆ. ಟೀಂ ಹನುಮಾನ್ ಉಳ್ಳಾಲ ತಂಡದ ಅಧ್ಯಕ್ಷ ಶಿವರಂಜನ್ ಸೇರಿದಂತೆ ತಿಲಕ್, ವಿಶಾಲ್, ವರುಣ್, ಆಕಾಶ್, ಕೌಶಿಕ್, ಲವೀನ್, ರಿತೇಶ್, ಪ್ರತೀಕ್, ರಿತಿಕ್ ಸೇರಿದಂತೆ ಹಲವರು ಸಕ್ರಿಯವಾಗಿ ಪಾಲ್ಗೊಂಡಿದ್ದರು. ಮಗುವಿನ ಚಿಕಿತ್ಸೆಯ ಜೊತೆಗೆ ಉಳ್ಳಾಲದ ಧರ್ಮನಗರ ನಿವಾಸಿ ಬೆನ್ನಿನ ಕ್ಯಾನ್ಸರಿನಿಂದ ಬಳಲುತ್ತಿರುವ ಪದ್ಮಾವತಿ ಎಂಬವರಿಗೂ ತಂಡ ಆರ್ಥಿಕ ಸಹಾಯವನ್ನು ಮಾಡಿದೆ.ಯುವಕರ ಸಮಾಜಮುಖಿ ಕಾರ್ಯ ಸಮಾಜಕ್ಕೆ ಮಾದರಿ : ಎಸ್.ಐ ಚೆಕ್ ವಿತರಿಸಿದ ಉಳ್ಳಾಲ ಠಾಣೆಯ ಎಸ್.ಐ ಶಿವಕುಮಾರ್ ಮಾತನಾಡಿ ` ಯುವಕರು ದಾರಿತಪ್ಪುವಂತಹ ಕಾಲಘಟ್ಟದಲ್ಲಿ ಇಂತಹ ಸಮಾಜಮುಖಿ ಸಂಘಟನೆಗಳ ಅಗತ್ಯತೆ ಸಮಾಜಕ್ಕೆ ಹೆಚ್ಚಿದೆ. ಯುವಕರನ್ನು ಒಗ್ಗೂಡಿಸಿ ಮಗುವಿನ ಚಿಕಿತ್ಸೆಯ ವೆಚ್ಚದಲ್ಲಿ ಅಲ್ಪಪಾಲು ನೀಡಿರುವ ಸಂಘಟಕರ ಕಾರ್ಯ ಶ್ಲಾಘನೀಯ. ಭವಿಷ್ಯದಲ್ಲಿ ಸಂಘಟನೆ ಇನ್ನಷ್ಟು ಶೋಷಿತ ವರ್ಗಕ್ಕೆ ಆಶ್ರಯವಾಗಲಿ ಎಂದು ಹಾರೈಸಿದರು.