ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

ಸುಬ್ರಹ್ಮಣ್ಯ, ಫೆ.14: ಕರ್ನಾಟಕ ರಾಜ್ಯಪಾಲ ಥಾವರ್‍ಚಂದ್ ಗೆಹ್ಲೋಟ್ ಅವರು ಮಂಗಳವಾರ ನಾಗಾರಾಧನೆಯ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿದರು. ಕ್ಷೇತ್ರಕ್ಕೆ ಆಗಮಿಸಿದ ಅವರನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ಶ್ರೀ ದೇವಳದಿಂದ ಗೌರವಪೂರ್ವಕವಾಗಿ ಸ್ವಾಗತಿಸಲಾಯಿತು.
ಪತ್ನಿ ಸೇರಿದಂತೆ ಕುಟುಂಬ ಸಮೇತರಾಗಿ ಶ್ರೀ ದೇವಳಕ್ಕೆ ಆಗಮಿಸಿದ ರಾಜ್ಯಪಾಲರನ್ನು ಶ್ರೀ ದೇವಳದ ಗಜರಾಣಿ ಯಶಸ್ವಿ ತನ್ನ ಸೊಂಡಿಲಿನಿಂದ ನಮಸ್ಕರಿಸಿ ಸ್ವಾಗತಿಸಿತು. ಬಳಿಕ ಶ್ರೀ ದೇವಳದ ಆಡಳಿತ ಮಂಡಳಿ ವತಿಯಿಂದ ರಾಜ್ಯಪಾಲರನ್ನು ಸ್ವಾಗತಿಸಲಾಯಿತು. ಬಳಿಕ ಪೂರ್ಣಕುಂಭ ಮತ್ತು ಮಂಗಳವಾದ್ಯದ ನಿನಾದದೊಂದಿಗೆ ರಾಜ್ಯಪಾಲರನ್ನು ಶ್ರೀ ದೇವಳದ ಒಳಗೆ ಕರೆದೊಯ್ಯಲಾಯಿತು.
ಬಳಿಕ ರಾಜ್ಯಪಾಲರು ಸಂಕಲ್ಪ ಮಾಡಿ ಶೇೀಷ ಸೇವೆಯನ್ನು ಶ್ರೀ ಸುಬ್ರಹ್ಮಣ್ಯ ದೇವರಿಗೆ ಅರ್ಪಿಸಿದರು. ನಂತರ ಶ್ರೀ ದೇವರ ದರುಶನ ಮಾಡಿದ ರಾಜ್ಯಪಾಲರಿಗೆ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯರು ಸಾಲು ಹೊದಿಸಿ ಮಹಾಪ್ರಸಾದ ನೀಡಿದರು. ರಾಜ್ಯಪಾಲರ ಕುಟುಂಬ ವರ್ಗದವರಿಗೆ ದೇವಳದ ಅರ್ಚಕರಾದ ವೇದಮೂರ್ತಿ ಸತ್ಯನಾರಾಯಣ ನೂರಿತ್ತಾಯರು ಮಹಾಪ್ರಸಾದ ನೀಡಿದರು.ನಂತರ ಹೊಸಳಿಗಮ್ಮನ ದರುಶನ ಮಾಡಿದ ರಾಜ್ಯಪಾಲರು ಅರ್ಚನೆ ಸೇವೆ ನೆರವೇರಿಸಿ, ಪ್ರಸಾದ ಸ್ವೀಕರಿಸಿದರು.

ರಾಜ್ಯಪಾಲರೊಂದಿಗೆ ಅವರ ಪತ್ನಿ ಅನಿತಾ ಗೆಹ್ಲೋಟ್, ಮೊಮ್ಮಕ್ಕಳಾದ ದೀರಜ್ ಗೆಹ್ಲೋಟ್, ರಜನಿ ಗೆಹ್ಲೋಟ್ ಜತೆಗಿದ್ದರು ದ.ಕ. ಜಿಲ್ಲಾಧಿಕಾರಿ ರವಿ ಕುಮಾರ್ ಎಂ.ಆರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಅಮ್ಟೆ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ, ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪ್ರಸನ್ನ ದರ್ಬೆ, ಶ್ರೀವತ್ಸ ಬೆಂಗಳೂರು, ಲೋಕೇಶ್ ಮುಂಡುಕಜೆ, ವನಜಾ.ವಿ.ಭಟ್, ಶೋಭಾ ಗಿರಿಧರ್, ಪುತ್ತೂರು ಉಪ ವಿಭಾಗದ ಸಹಾಯಕ ಆಯುಕ್ತ ಗಿರೀಶ್ ನಂದನ್, ಡಿಎಸ್‍ಪಿ ಡಾ.ವೀರಯ್ಯ ಹಿರೇಮಠ್, ವೃತ್ತ ನಿರೀಕ್ಷಕ ರವೀಂದ್ರ ಎಂ.ಸಿ, ಸುಬ್ರಹ್ಮಣ್ಯ ಠಾಣಾಧಿಕಾರಿ ಮಂಜುನಾಥ್, ಎಎಸ್‍ಐ ಕರುಣಾಕರ್ ಉಪಸ್ಥಿತರಿದ್ದರು.
ರಾಜ್ಯಪಾಲರು ಕ್ಷೇತ್ರಕ್ಕೆ ಭೇಟಿ ನೀಡುವ ಮೊದಲೇ ಕ್ಷೇತ್ರದಲ್ಲಿ ಉನ್ನತ ಮಟ್ಟದ ಅಧಿಕಾರಿಗಳಿಂದ ಸೂಕ್ತ ರೀತಿಯ ಬಂದೋಬಸ್ತ್ ಹಾಗೂ ಸಕಲ ವ್ಯವಸ್ಥೆಗೆ ಸಿದ್ಧತೆ ನಡೆಸಲಾಗಿತ್ತು. ವಿವಿಐಪಿ ಸಂಪರ್ಕ ರಸ್ತೆಯನ್ನೂ ದುರಸ್ತಿ ಪಡಿಸಲಾಗಿತ್ತು. ರಾಜ್ಯಪಾಲರು ದೇವಳ ಭೇಟಿ ಹಿನ್ನಲೆಯಲ್ಲಿ ರಾಜ್ಯಪಾಲರ ಪ್ರವೇಶ ವೇಳೆ ಭಕ್ತರ ದರ್ಶನವನ್ನು ನಿಲ್ಲಿಸಲಾಗಿತ್ತು. ಪೇಟೆಯಾದ್ಯಂತ ಪೊಲೀಸ್ರನ್ನು ನಿಯೋಜಿಸಲಾಗಿತ್ತು. ರಾಜ್ಯಪಾಲರ ಆಗಮನ ಹಾಗೂ ನಿರ್ಗಮನದ ವೇಳೆ ಸಂಚರಿಸುವ ರಸ್ತೆಯಲ್ಲಿ ಹೆಚ್ಚಿನ ಭದ್ರತೆಯೊಂದಿಗೆ ಝಿರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿತ್ತು. ರಾಜ್ಯಪಾಲರು ಕಳೆದ ಜೂನ್ ನಲ್ಲಿಯೂ ಕ್ಷೇತ್ರಕ್ಕೆ ಭೇಟಿ ನೀಡಿ ಶ್ರೀ ದೇವರ ದರುಶನ ಪಡೆದು, ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು.
