ಮೂಡುಬಿದಿರೆಯಲ್ಲಿ ಜೈನ ಬಾಂಧವರ ಹೊಸ ತೆನೆ ಹಬ್ಬ
ಮೂಡುಬಿದಿರೆ: ಜೈನ ಬಾಂಧವರು ಆಚರಿಸಿಕೊಂಡು ಬರುವ ಹೊಸ ತೆನೆ ಹಬ್ಬ(ಕುರಾಲ್ ಪರ್ಬ) ಜೈನ ಕಾಶಿ ಮೂಡುಬಿದಿರೆಯಲ್ಲಿ ರವಿವಾರ ಜರಗಿತು.
ಬೆಟ್ಟೇರಿಯಲ್ಲಿರುವ, ಮಹಾವೀರ ಸಂಘ ದವರ ‘ಕೊರಲ್ ಕಟ್ಟೆ’ಯಲ್ಲಿ ಹೊಸ ತೆನೆರಾಶಿ ಹಾಕಿ 18 ಬಸದಿಗಳ ಇಂದ್ರರು ಪೂಜೆ ಸಲ್ಲಿಸಿದರು. ಶ್ರೀಮಠದಲ್ಲಿ ಪಪೂ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಪಟ್ಟಾಚಾರ್ಯ ಸ್ವಾಮೀಜಿ ಪಾವನ ಸಾನ್ನಿಧ್ಯ ಮಾರ್ಗದರ್ಶನದಲ್ಲಿ 18ಬಸದಿಗಳ ದೇವಕಾರ್ಯ ನೆರವೇರಿಸಿ ಅರ್ಚಕರಿಗೆ ದಾನ ದಕ್ಷಿಣೆ ನೀಡಿ ಶ್ರೀಮಠ, ವಿವಿಧ ಬಸದಿಗಳ ಜೀರ್ಣೋದ್ದಾರ ಸಂಕಲ್ಪ ಮಾಡಿ ಲೋಕದಲ್ಲಿ ಶಾಂತಿ ಸೌಹಾರ್ದತೆ ನೆಲೆಯಾಗಲಿ ಎಂದು ಹರಸಿದರು.
ಬೆಟ್ಟೇರಿ ವಿಮಲ್ ಕುಮಾರ್ ಶೆಟ್ಟಿ ಅವರು ಹೊಸತನೆ ರಾಶಿಯನ್ನು ರಾಜವರ್ಮ ಬೈಲಂಗಡಿ ಇವರು ತೆನೆ ಕಟ್ಟಲು ನಾರನ್ನು ಒದಗಿಸಿದ್ದು ಬಸದಿಗಳ ಮೊತ್ತೇಸರರಲ್ಲಿ ಓರ್ವರಾದ ಪಟ್ಟಶೆಟ್ಟಿ ಸುಧೇಶ್ ಕುಮಾರ್ ಇವರು ಮನೆತನದ ವತಿಯಿಂದ ಹೊಸ ಅಕ್ಕಿಯನ್ನು ಬದಗಿಸಿದ್ದರು. ಹೊಸತೆನೆಯನ್ನು ಶ್ರೀ ಜೈನ ಮಠ, ಗುರುಗಳ ಬಸದಿ, ಹೊಸಬಸದಿ ಬಸದಿಗಳಿಗೆ ಸಲ್ಲಿಸಲಾಯಿತು. ಬಸದಿಗಳ ಮೊತ್ತೇಸರರು, ಜೈನ ಸಮುದಾಯ ಪ್ರಮುಖರ ಸಹಿತ ಶ್ರಾವಕರು ಹೊಸತೆನೆ ಯನ್ನು ಮನೆಗಳಿಗೆ ಒಯ್ದು ಪೂಜಿಸಿ, ಹೊಸಅಕ್ಕಿ ಬಳಸಿ ಭೋಜನ ಸ್ವೀಕರಿಸಿದರು.