ಬಂಟ್ವಾಳ: ನದಿ ತೀರದ ತಗ್ಗು ಪ್ರದೇಶಗಳು ನೆರೆ ನೀರಿನಿಂದ ಜಲಾವೃತ

ಬಂಟ್ವಾಳ: ತಾಲೂಕು ವ್ಯಾಪ್ತಿಯಲ್ಲಿ ಬುಧವಾರ ರಾತ್ರಿಯಿಡಿ ಭಾರಿ ಮಳೆ ಸುರಿದಿದ್ದು ನದಿ ತೀರದ ತಗ್ಗು ಪ್ರದೇಶಗಳು ನೆರೆ ನೀರಿನಿಂದ ಜಲಾವೃತಗೊಂಡಿದೆ.
ನೇತ್ರಾವತಿ ನದಿಯಲ್ಲಿ ಗುರುವಾರ ಬೆಳಗ್ಗಿನ ವೇಳೆ ನೀರಿನ ಮಟ್ಟ7.8 ಮೀಟರ್ ದಾಖಲಾಗಿದ್ದು ಅಪಾಯದ ಮಟ್ಟವನ್ನು ಮೀರುವ ರೀತಿ ನದಿಯಲ್ಲಿ ನೀರು ಹರಿದು ಬರುತ್ತಿದ್ದು ಜನರಲ್ಲಿ ಆತಂಕ ಮನೆಮಾಡಿತ್ತು.

ಪಾಣೆಮಂಗಳೂರು ಬಳಿಯ ಆಲಡ್ಕ ಮಿಲಿಟರಿ ಮೈದಾನ, ಶ್ರೀಶಾರದ ಪ್ರೌಢಶಾಲೆಯ ಮೈದಾನ, ನಂದಾವರ ಬಳಿಯ ಅಡಿಕೆ ತೋಟ ನೆರೆ ನೀರಿನಿಂದ ಸಂಪೂರ್ಣವಾಗಿ ಆವೃತ್ತಗೊಂಡಿತ್ತು. ಬಡ್ಡಕಟ್ಟೆ ಪರಿಸರದಲ್ಲಿ ನದಿಯ ಮೇಲಂಚಿನಲ್ಲಿಯೇ ನೀರು ನುಗ್ಗಿ ಬರುತ್ತಿತ್ತು. ಆಲಡ್ಕ, ಬಡ್ಡಕಟ್ಟೆ ಪರಿಸರದಲ್ಲಿ ಸ್ಥಳೀಯ ಅಂಗಡಿ ವ್ಯಾಪಾರಿಗಳು ಮುನ್ನೆಚ್ಚರಿಕೆಯಾಗಿ ಅಂಗಡಿ ಸಾಮಾಗ್ರಿಗಳನ್ನು ಸುರಕ್ಷಿತವಾಗಿ ಎತ್ತಿಟ್ಟುಕೊಳ್ಳುವ ದೃಶ್ಯ ಕಂಡು ಬಂತು.

ಬುಧವಾರ ರಾತ್ರಿ ಸುರಿದ ಗಾಳಿ ಮಳೆಯಿಂದಾಗಿ ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಭಾರಿ ಏರಿಕೆಯಾಗಿದೆ. ರಾತ್ರಿ 10.30ಕ್ಕೆ 7.2 ಮೀಟರ್ ಗೆ ಏರಿಕೆಯಾಗಿದ್ದು ಗುರುವಾರ ಬೆಳಗ್ಗೆ ಈ ವರ್ಷದ ಗರಿಷ್ಠ 7.8 ಮೀಟರ್ ದಾಖಲಾಗಿತ್ತು. (ಅಪಾಯದ ಮಟ್ಟ 8.5). ಬಳಿಕ ಮಳೆ ಕಡಿಮೆಯಾಗಿ ನೀರಿನ ಮಟ್ಟ ತಟಸ್ಥವಾಗಿತ್ತು.
ನೆರೆ ಮತ್ತಿತರ ಪ್ರಾಕೃತಿಕ ವಿಕೋಪಗಳನ್ನು ತಡೆಯಲು ತಾಲೂಕಾಡಳಿತ ಸರ್ವ ಸನ್ನದ್ದವಾಗಿದೆ.
ನೆರೆ ಭೀತಿಯಿಂದಾಗಿ ಪಾಣೆಮಂಗಳೂರಿನ ಆಲಡ್ಕದ ೧೦ ಕುಟುಂಬವನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಇನ್ನುಳಿದಂತೆ ಅಪಾಯದ ಮಟ್ಟ ಸಂಭವಿಸಿದರೆ, ಉಳಿದ ಸಂಭ್ಯಾವ್ಯ ಅಪಾಯದ ಜಾಗದಲ್ಲಿ ವಾಸಿಸುವವರಿಗೂ ಸೂಚನೆ ನೀಡಲಾಗಿದ್ದು, ತಾಲೂಕಾಡಳಿತ ಯಾವುದೇ ಅಪಾಯವನ್ನು ಎದುರಿಸಲು ಸನ್ನದ್ಧವಾಗಿದೆ ಎಂದು ತಹಸೀಲ್ದಾರ್ ಡಿ.ಅರ್ಚನಾ ಭಟ್ ತಿಳಿಸಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿಗಳು ಪರಿಸ್ಥಿತಿ ಎದುರಿಸಲು ಸನ್ನದ್ಧರಾಗಿದ್ದರು.