ಈ ಬಾರಿ ಮಲೆನಾಡಿನ ಶಿವಮೊಗ್ಗದಲ್ಲಿ ಕಂಬಳ: ಅಕ್ಟೋಬರ್ 26ರಿಂದ ಕಂಬಳ ಸೀಸನ್ ಆರಂಭ
ಮೂಡುಬಿದಿರೆ : ಕಳೆದ ಬಾರಿ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ತುಳುನಾಡಿನ ಕಂಬಳವನ್ನು ಆಯೋಜಿಸಿ ಸೈ ಎನಿಸಿಕೊಂಡಿರುವ ಕಂಬಳ ಸಮಿತಿಯು ಈ ಬಾರಿ ಮಲೆನಾಡಿನ ಶಿವಮೊಗ್ಗದಲ್ಲಿ ಕಂಬಳ ನಡೆಸಲು ನಿರ್ಧರಿಸಿದೆ ಎಂದು ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ಹೇಳಿದ್ದಾರೆ.
ಮೂಡುಬಿದಿರೆ ಸ್ವರ್ಣ ಮಂದಿರದಲ್ಲಿ ನಡೆದ ಜಿಲ್ಲಾ ಕಂಬಳ ಸಮಿತಿಯ ವಿಶೇಷ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಂಬಳದ ಬಗ್ಗೆ ಅಪಾರ ಆಸಕ್ತಿಯನ್ನು ಹೊಂದಿರುವ ಎಲ್ಯಾಸ್ ಲೂಯಿಸ್ ಅವರ ಮುತುವರ್ಜಿಯಲ್ಲಿ ಈ ಕಂಬಳ ನಡೆಯಲಿದೆ. ರಾಜ್ಯದ ಮಾಜಿ ಡಿಸಿಎಂ ಈಶ್ವರಪ್ಪ ಮತ್ತಿತರರು ಅಲ್ಲಿ ಕಂಬಳ ನಡೆಯಲು ಸಹಕಾರ ನೀಡಲಿದ್ದಾರೆ.ಈ ವರ್ಷದ ಕೊನೆಯದಾಗಿ ಏಪ್ರಿಲ್‌ನಲ್ಲಿ ಈ ಕಂಬಳ ನಡೆಯಲಿದೆ ಎಂದು ತಿಳಿಸಿದರು.
ಈ ಬಾರಿ 26 ಕಂಬಳಗಳು :
ಜಿಲ್ಲಾ ಕಂಬಳ ಸಮಿತಿಯ ನೇತೃತ್ವದಲ್ಲಿ ಈ ಋತುವಿನಲ್ಲಿ 26 ಕಂಬಳಗಳು ನಡೆಯಲಿದ್ದು ಅಕ್ಟೋಬರ್ 26ರಂದು ಬೆಂಗಳೂರಿನಲ್ಲಿ ಮೊದಲ ಕಂಬಳ ನಡೆಯಲಿದ್ದು 2025ರ ಎಪ್ರಿಲ್ 19ರಂದು ಶಿವಮೊಗ್ಗದಲ್ಲಿ ಕೊನೆಯ ಕಂಬಳ ನಡೆಯಲಿದೆ.
ಈಗಾಗಲೇ ಜಿಲ್ಲೆಯಲ್ಲಿ ಕಂಬಳವನ್ನು ಶಿಸ್ತುಬದ್ಧವಾಗಿ ನಡೆಸುತ್ತಿದ್ದು ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ಇದನ್ನು ಮತ್ತಷ್ಟು ಆಕರ್ಷಣೀಯವಾಗಿ ನಡೆಸಲು ಕೆಲವೊಂದು ನಿಯಮಗಳನ್ನು ಆಯಾ ಕಂಬಳ ಸಮಿತಿಗಳು ಪಾಲಿಸಬೇಕಾಗಿದ್ದು, ಅದಕ್ಕಾಗಿ ಉಪನಿಬಂಧನೆಗಳನ್ನು ರಚಿಸಲಾಗುವುದು. ಕಂಬಳ ವಿಳಂಬವಾಗುವುದನ್ನು ತಡೆಯಲು ರೂಪುರೇಷೆಗಳನ್ನು ಸಿದ್ಧಪಡಿಸಲಾಗುವುದು.
ಪಿಲಿಕುಳದಲ್ಲಿ ಮತ್ತೆ ಕಂಬಳ ಆರಂಭ : ನಿಂತು ಹೋಗಿದ್ದ ಪಿಲಿಕುಳ ಕಂಬಳವನ್ನು ಈ ವರ್ಷದಿಂದ ಪುನರಾರಂಭಿಸಲಾಗುವುದು. ಕಂಬಳವನ್ನು ಪ್ರವಾಸೋದ್ಯಮದ ಭಾಗವಾಗಿಸುವ ನಿಟ್ಟಿನಲ್ಲಿ ಈ ಕಂಬಳದಲ್ಲಿ 4 ದಿನಗಳ `ತುಳುನಾಡ ವೈಭವ’ ಕಾರ್ಯಕ್ರಮ ನಡೆಯಲಿದೆ. ಕಂಬಳಕ್ಕೆ ಕುರಿತ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗುವುದು, ಅಲ್ಲದೆ ಕಂಬಳ ಭವನ ನಿರ್ಮಿಸಲಾಗುವುದು .
ಈ ಜಿಲ್ಲೆಯಲ್ಲಿ ನಡೆಯುವ 26 ಕಂಬಳಗಳಿಗೂ ತಲಾ 5ಲಕ್ಷದಂತೆ ಸರ್ಕಾರರ ಅನುದಾನ ಬಿಡುಗಡೆಗೊಳಿಸಬೇಕು. ಈ ಕುರಿತು ಕಂಬಳ ನಿಯೋಗ ಈಗಾಗಲೇ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಬೇಡಿಕೆ ಸಲ್ಲಿಸಿದ್ದು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಬೆಳಪು ದೇವಿಪ್ರಸಾದ್ ಶೆಟ್ಟಿ ತಿಳಿಸಿದರು.
ಕಾಂತಾರ ಸಿನೆಮಾದಲ್ಲಿ ಕಂಬಳ ನೋಡಿದ ಬಳಿಕ ಶಿವಮೊಗ್ಗ ಜಿಲ್ಲೆಯಲ್ಲಿ ಕಂಬಳ ಮಾಡುವ ಉತ್ಸಾಹ ಬಂತು ಎಂದು ಶಿವಮೊಗ್ಗ ಕಂಬಳ ಸಮಿತಿಯ ಎಲ್ಯಾಸ್ ಲೂಯಿಸ್ ಹೇಳಿದರು. ಈ ಕಂಬಳ ನಡೆಸಲು ರೋಟರಿ ಸಂಸ್ಥೆ ಸಹಿತ ತುಂಬಾ ಮಂದಿ ಬೆಂಬಲ ನೀಡುತ್ತಿದ್ದಾರೆ ಅಲ್ಲದೆ ಮಾಜಿ ಡಿಸಿಎಂ ಈಶ್ವರಪ್ಪ, ಅವರ ಮಗ ಕಾಂತೇಶ್ ಮತ್ತು ಅವರ ಆಪ್ತ ಸಂತೋಷ್ ಹಾಗೂ ಇತರರು ಈ ಕಂಬಳಕ್ಕೆ ಸಹಕರಿಸುತ್ತಿದ್ದಾರೆ ಎಂದು ಹೇಳಿದರು.
ಶಿವಮೊಗ್ಗ ಕಂಬಳ ಸಮಿತಿಗೆ ಇದೇ ವೇಳೆ ಸದಸ್ಯತ್ವ ನೀಡಲಾಯಿತು.
ಮೂಡ ಅಧ್ಯಕ್ಷರಾಗಿ ಆಯ್ಕೆಯಾದ ಕಂಬಳ ಕೋಣಗಳ ಯಜಮಾನ ಹರ್ಷವರ್ದನ ಪಡಿವಾಳ್ ಅವರನ್ನು ಸನ್ಮಾನಿಸಲಾಯಿತು.
ಕಂಬಳ ಸಮಿತಿಯ ಗೌರವಾಧಕ್ಷ ಎರ್ಮಾಳ್ ರೋಹಿತ್ ಹೆಗ್ಡೆ, ಉಪಾಧ್ಯಕ್ಷರಾದ ನವೀನಚಂದ್ರ ಆಳ್ವ, ಶ್ರೀಕಾಂತ ಭಟ್, ಸಂದೀಪ ಶೆಟ್ಟಿ, ಪ್ರಶಾಂತ ಕಾಜವ, ರಶ್ಮಿತ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಲೋಕೇಶ್ ಶೆಟ್ಟಿ ಮುಚ್ಚೂರು, ಕೋಶಾಧಿಕಾರಿ ಚಂದ್ರಹಾಸ ಸನಿಲ್, ತೀರ್ಪಗಾರರ ಸಂಚಾಲಕ ವಿಜಯ್‌ಕುಮಾರ್ ಕಂಗಿನಮನೆ, ಶಿವಮೊಗ್ಗ ಕಂಬಳ ಸಮಿತಿಯ ಕಲ್ಪನಾ, ವಿಮಲೇಶ್ ಹೆಗ್ಡೆ, ನಾಗರಾಜ್ ಉಪಸ್ಥಿತರಿದ್ದರು.