ತೊಕ್ಕೊಟ್ಟು-ಕಾಪಿಕಾಡ್ ಹೆದ್ದಾರಿಯಲ್ಲಿ ಅವೈಜ್ಞಾನಿಕ ಯೂಟರ್ನ್ : ಪ್ರತಿನಿತ್ಯ ಅಪಘಾತ – ಪ್ರಾಣ ಭಯದಲ್ಲಿ ಸ್ಥಳೀಯರು

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಉಳ್ಳಾಲ ತಾಲೂಕಿನ ತೊಕ್ಕೊಟ್ಟು ಓವರ್ ಬ್ರಿಡ್ಜ್ ಜಂಕ್ಷನ್‍ನಿಂದ ಕುಂಪಲ ಬೈಪಾಸ್ ತನಕ ಸರ್ವಿಸ್ ರಸ್ತೆಯನ್ನು ವಿಸ್ತರಿಸಬೇಕು. ಹಾಗೂ ಕಾಪಿಕಾಡ್ ಬಳಿ ಇರುವ ಅವೈಜ್ಞಾನಿಕ ಯೂಟರ್ನ್ ಓಪನ್ ರಸ್ತೆಯನ್ನು ಮುಚ್ಚಬೇಕು ಎಂದು ಆಗ್ರಹಿಸಿ ತೊಕ್ಕೊಟ್ಟು ಹೆದ್ದಾರಿ ಸುರಕ್ಷತಾ ಹೋರಾಟ ಸಮಿತಿ ಜಿಲ್ಲಾಡಳಿತÀ ಹಾಗೂ ಹೆದ್ದಾರಿ ಇಲಾಖೆಗೆ ಮನವಿ ಮಾಡಿದೆ. ಮನವಿ ಹಿನ್ನಲೆಯಲ್ಲಿ ಸ್ಥಳ ಪರಿಶೀಲನೆ ಮಾಡಿದ ರಾಷ್ಟ್ರೀಯ ಹೆದ್ದಾರಿ ಪ್ರಾದಿಕಾರದ ಯೋಜನಾ ನಿರ್ದೇಶಕ ಲಿಂಗೇ ಗೌಡ ಅವರು ಸ್ಥಳೀಯರ ಬೇಡಿಕೆಗಳಿಗೆ ಸೂಕ್ತವಾಗಿ ಸ್ಪಂದಿಸುವುದಾಗಿ ಭರವಸೆ ನೀಡಿದರು.

ಸಮರ್ಪಕವಾದ ಸರ್ವೀಸ್ ರಸ್ತೆ ಇಲ್ಲದೆ ಇರುವುದರಿಂದ ಈ ಪ್ರದೇಶ ವ್ಯಾಪ್ತಿಯು ನಿತ್ಯ ಅಪಘಾತದ ವಲಯವಾಗಿ ಮಾರ್ಪಟ್ಟಿದೆ. ಈ ಒಂದೂವರೆ ವರ್ಷದಲ್ಲೇ ಈ ಪರಿಸರ ವ್ಯಾಪ್ತಿಯಲ್ಲಿ 7 ಮಂದಿ ಅಪಘಾತದಿಂದ ಮೃತಪಟ್ಟಿದ್ದಾರೆ. ಜನರ ಪ್ರಾಣ ರಕ್ಷಿಸುವ ಹಾಗೂ ವಾಹನ ಸವಾರರ ಹಿತ ರಕ್ಷಿಸುವ ಉದ್ದೇಶದಿಂದ ತಕ್ಷಣವಾಗಿ ಕಾಪಿಕಾಡ್ ಅವೈಜ್ನಾನಿಕ ಯೂ ಟರ್ನ್ ಓಪನ್ ರಸ್ತೆಯನ್ನು ಮುಚ್ಚಿ ಸರ್ವೀಸ್ ರಸ್ತೆಯನ್ನು ಕುಂಪಲ ಬೈಪಾಸ್ ತನಕ ವಿಸ್ತರಿಸುವಂತೆ ತೊಕ್ಕೊಟ್ಟು ಹೆದ್ದಾರಿ ಸುರಕ್ಷತಾ ಹೋರಾಟ ಸಮಿತಿ ವಿನಂತಿ ಮಾಡಿದೆ.
ವರ್ಷಗಳ ಹಿಂದೆ ತೊಕ್ಕೊಟ್ಟು ಫ್ಲೈ ಓವರ್ ಸಂಚಾರಕ್ಕೆ ಮುಕ್ತವಾದ ಸಂದರ್ಭ ಓವರ್ ಬ್ರಿಡ್ಜ್ ಉಳ್ಳಾಲ ಕ್ರಾಸ್ ಜಂಕ್ಷನ್‍ನಲ್ಲಿ ಜನರ ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ತೀರಾ ತೊಡಕು ಉಂಟಾಗಿ ಅಪಘಾತಗಳು ನಡೆಯುತ್ತಿದ್ದವು , ಆ ಸಂದರ್ಭದಲ್ಲಿ ಅಲ್ಲಿನ ಸಮಸ್ಯೆಯನ್ನು ಪಕ್ಕದ ಕಾಪಿಕಾಡ್‍ಗೆ ದಾಟಿಸಲಾಯಿತು. ಹೆದ್ದಾರಿಯ ಮೂಲ ನಕ್ಷೆಯಲ್ಲಿ ಇಲ್ಲದೇ ಇದ್ದಾಗ್ಯೂ ಕಾಪಿಕಾಡ್‍ನಲ್ಲಿ ಯೂ ಟರ್ನ್ ಓಪನ್ ಮಾಡಿ ಸರಿಯಾದ ಸರ್ವೀಸ್ ರಸ್ತೆಯನ್ನು ನಿರ್ಮಾಣ ಮಾಡದೆ ಸಂಚಾರ ಅನುವು ಮಾಡಿದ ಪರಿಣಾಮವಾಗಿ ಈಗ ಸ್ಥಳೀಯರು ನಿತ್ಯ ಸಂಕಷ್ಟ ಅನುಭವಿಸುವಂತಾಗಿದೆ.

ಹೋರಾಟ ಸಮಿತಿಯ ಮನವಿಗೆ ಸ್ಪಂದಿಸಿ ಸ್ಥಳಕ್ಕೆ ಆಗಮಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾದಿಕಾರದ ಯೋಜನಾ ನಿರ್ದೇಶಕ ಲಿಂಗೇ ಗೌಡ ಅವರು ಕಾಪಿಕಾಡಿನಿಂದ ಅಂಬಿಕಾರೋಡ್ ತನಕ ಸ್ಥಳ ಪರಿಶೀಲನೆ ನಡೆಸಿ ಸ್ಥಳಿಯರೊಂದಿಗೆ ಚರ್ಚೆ ನಡೆಸಿದರು.ಇಲ್ಲಿನ ಸಮಸ್ಯೆ ತಮಗೆ ಅರಿವಾಗಿದ್ದು, ಸ್ಥಳಿಯ ಪೋಲಿಸರ ಅನುಮೋದನೆ ಲಭಿಸಿದ ತಕ್ಷಣ ಕಾಪಿಕಾಡ್ ಯುಟರ್ನ್ ರದ್ದು ಮಾಡಿ ಅಂಬಿಕರೋಡ್ ನಲ್ಲಿ ಯೂಟರ್ನ್ ತೆರೆಯುವುದಾಗು ಭರವಸೆ ನೀಡಿದರು.

ಸಂಸದರು ಮತ್ತು ಶಾಸಕರಿಂದ ಪ್ರಸ್ತಾವನೆ ಬಂದ ತಕ್ಷಣ ಸರ್ವಿಸ್ ರಸ್ತೆಯನ್ನು ವಿಸ್ರಿಸಲು ಕ್ರಮ ಕೈ ಗೊಳ್ಳುವುದಾಗಿ ಭರವಸೆ ನೀಡಿದರು.ತೊಕ್ಕೊಟ್ಟು ಹೆದ್ದಾರಿ ಸುರಕ್ಷತಾ ಹೋರಾಟ ಸಮಿತಿ ಅಧ್ಯಕ್ಷ ಸುಕುಮಾರ್ ತೊಕ್ಕೊಟ್ಟು, ಪ್ರಧಾನ ಕಾರ್ಯದರ್ಶಿ ತಾರಾನಾಥ್ ಗಟ್ಟಿ ಕಾಪಿಕಾಡ್, ಗೌರವ ಅಧ್ಯಕ್ಷರು ಈಶ್ವರ್ ಉಳ್ಲಾಲ್, ಉಳ್ಳಾಲ ನಗರಸಭೆ ಸದಸ್ಯೆ ಭವಾನಿ, ಗೌರವ ಸಲಹೆಗಾರರಾದ ರಘುರಾಮ ಶೆಟ್ಟಿ, ಪ್ರಶಾಂತ್ ಕಾಪಿಕಾಡ್, ಗಣೇಶ್ ಕಾಪಿಕಾಡ್ , ಉಪಾಧ್ಯಕ್ಷರು ದಮಯಂತಿ ಗೋಪಿನಾಥ್ ಕಾಪಿಕಾಡ್ , ಜನಾರ್ಧನ್ , ಹ್ಯಾರಿ ಡಿಸೋಜ, ಲಾಜರ್, ಕಿರಣ್ ಕಾಪಿಕಾಡ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ತಿತರಿದ್ದರು.