ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ನಿಲುವು ಅವೈಜ್ಞಾನಿಕ, ಖಂಡನೀಯ : ಹೋರಾಟ ಸಮಿತಿ

ಇದೀಗ ಮುಚ್ಚಲಾಗಿರುವ ಸುರತ್ಕಲ್ ಅಕ್ರಮ ಟೋಲ್ ಗೇಟ್ ಸುಂಕವನ್ನು ಹೆಜಮಾಡಿ ನವಯುಗ್ ಟೋಲ್ ಪ್ಲಾಜಾದಲ್ಲಿ ಸಂಗ್ರಹಿಸುವ ಹೆದ್ದಾರಿ ಪ್ರಾಧಿಕಾರದ ಆದೇಶದ ಕುರಿತು ಉಡುಪಿ ಜಿಲ್ಲಾಡಳಿತ ನಡೆಸಿದ ಸಭೆಯ ತೀರ್ಮಾನದ ಕುರಿತಂತೆ ದಕ್ಷಿಣ ಕನ್ನಡ ಉಸ್ತುವಾರಿ ಸಚಿವರು ನೀಡಿರುವ ಮಾಹಿತಿ ಕುರಿತು ಹೋರಾಟ ಸಮಿತಿ ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸುತ್ತದೆ.

ಹೆಜಮಾಡಿ ಟೋಲ್ ಗೇಟ್ ನಲ್ಲಿ ಉಡುಪಿ ನೊಂದಾವಣೆಯ ಕೆ ಎ 20 ವಾಹನಗಳಿಗೆ ಮಾತ್ರ ಸುರತ್ಕಲ್ ಟೋಲ್ ಸುಂಕದಿಂದ ಪೂರ್ಣ ವಿನಾಯತಿ ಕೊಡಬೇಕು, ಆ ವಾಹನಗಳ ಓಡಾಟಕ್ಕೆ ಪ್ರತ್ಯೇಕ ಲೇನ್ ನಿರ್ಮಿಸಬೇಕು ಎಂಬ ಪ್ರಸ್ತಾವನೆ ಅವೈಜ್ಞಾನಿಕ ಮಾತ್ರ ಅಲ್ಲ. ತೀವ್ರವಾದ ತಾರತಮ್ಯದಿಂದ ಕೂಡಿದೆ. ಸುರತ್ಕಲ್ ಅಕ್ರಮ ಟೋಲ್ ಸುಂಕವನ್ನು ಉಡುಪಿ, ದ.ಕ ವಾಹನಗಳು ಮಾತ್ರವಲ್ಲ, ಹೆಜಮಾಡಿ ಟೋಲ್ ಪ್ಲಾಜಾ ದಾಟುವ ಯಾವುದೇ ರಾಜ್ಯಗಳ ವಾಹನಗಳಿಂದ ಸಂಗ್ರಹಿಸಿದರೂ ಅದು ಸುಲಿಗೆಯೇ ಆಗುತ್ತದೆ. ಸುರತ್ಕಲ್ ನಲ್ಲಿ ಮಂಗಳೂರು ನೊಂದಾವಣೆಯ ಖಾಸಗಿ ವಾಹನಗಳಿಗೆ ಉಚಿತ ಓಡಾಟದ ಅವಕಾಶ ಇದ್ದರೂ ಟೋಲ್ ಸುಲಿಗೆಯ ವಿರುದ್ದ ಹೋರಾಟ ನಡೆಸಿರುವುದು ಇಂತಹ ವಿಶಾಲ ಮನೋಭಾವದಿಂದ, ನ್ಯಾಯಪ್ರಜ್ಞೆಯಿಂದ‌. ಇದು ಬಿಜೆಪಿ ಜನಪ್ರತಿನಿಧಿಗಳಿಗೆ, ಉಡುಪಿ ಜಿಲ್ಲಾಡಳಿತಕ್ಕೆ ಅರ್ಥ ಆಗದಿರುವುದು ದುರದೃಷ್ಟಕರ.

ಮಾನ್ಯ ಸುನಿಲ್ ಕುಮಾರ್ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರು. ಅವರಿಗೆ ದಕ್ಷಿಣ ಕ‌ನ್ನಡ ಜಿಲ್ಲೆಯ ಜನತೆಯ, ಆಡಳಿತದ ಹಿತಾಸಕ್ತಿಗಳನ್ನು ಎತ್ತಿಹಿಡಿಯುವ ಕರ್ತವ್ಯ ಇದೆ. ಹಾಗಿರುತ್ತಾ ಅವರು ಉಡುಪಿ ಜಿಲ್ಲಾಡಳಿತದ ಸಭೆಯಲ್ಲಿ ಭಾಗಿಯಾಗಿ ಮಂಗಳೂರು ವಾಹನಗಳ ಹಿತಾಸಕ್ತಿಯನ್ನು ಕಡೆಗಣಿಸಿರುವುದು, ಉಚಿತ ಪ್ರಯಾಣದ ಅವಕಾಶವನ್ನು ನಿರಾಕರಿಸಿರುವುದು ಖಂಡನೀಯ. ಆ ಮೂಲಕ ಅವರು ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಮುಂದುವರಿಯುವ ನೈತಿಕತೆಯನ್ನು ಕಳೆದುಕೊಂಡಿದ್ದಾರೆ. ಉಡಪಿ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಮಾನ್ಯ ಅಂಗಾರ ರವರು ಸಭೆಯ ಅಧ್ಯಕ್ಷತೆ ವಹಿಸಿದ್ದರೂ ಈ ಚರ್ಚೆಗಳ ಸಂದರ್ಭ ಮೂಕ ಪ್ರೇಕ್ಷಕರಾಗಿದ್ದದ್ದು ದುರದೃಷ್ಟಕರ.

ಸುರತ್ಕಲ್ ಅಕ್ರಮ ಟೋಲ್ ಗೇಟ್ ತೆರವು ಸಂಬಂಧ ಹೆದ್ದಾರಿ ಪ್ರಾಧಿಕಾರದ ಮಹತ್ವದ ಸಭೆ ಅಕ್ಟೋಬರ್ 14, 2022 ರಂದು ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಡಾ. ಕೆ ವಿ ರಾಜೇಂದ್ರ ಅವರ ಅಧ್ಯಕ್ಷತೆಯಲ್ಲಿ ನಡೆದಿತ್ತು. ಆ ಸಭೆಯಲ್ಲಿ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿ ಎಮ್ ಕೆ ವತಾರೆ ಸ್ವತಹ ಭಾಗಿಯಾಗಿದ್ದರು. ವಿಲೀನದ ಕುರಿತು ನಿರ್ಣಾಯಕ ಪ್ರಸ್ಥಾಪಗಳು ಆ ಸಭೆಯಲ್ಲಿ ತೀರ್ಮಾನಗೊಂಡಿದ್ದವು. ದ.ಕ. ಜಿಲ್ಲಾ ಉಸ್ತುವಾರಿ ಸಚಿವರಾಗಿ, ಸುರತ್ಕಲ್ ಟೋಲ್ ನಿಂದ ಅತಿ ಹೆಚ್ಚು ಭಾದಿತ ಉಡುಪಿ ಜಿಲ್ಲೆಗೆ ಸೇರಿದ ಶಾಸಕರಾಗಿ ಸುನಿಲ್ ಕುಮಾರ್ ಆ ಸಭೆಯಲ್ಲಿ ಭಾಗಿಯಾಗದಿರುವುದು, ಜಿಲ್ಲೆಯ ಉಳಿದ ಶಾಸಕರು ಭಾಗವಹಿಸುವಂತೆ ಮಾಡದಿರುವುದು ಯಾಕೆ ? ಅಂದಿನ ಸಭೆಯಲ್ಲಿ ಉಸ್ತುವಾರಿ ಸಚಿವರು ಭಾಗಿಗಳಾಗಿದ್ದರೆ ಸಭೆಯ ಅಧ್ಯಕ್ಷತೆ ಸುನಿಲ್ ಕುಮಾರ್ ಅವರದ್ದೇ ಆಗಿರುತ್ತಿತ್ತು ಅಲ್ಲವೇ? ಅಂದು ಸಭೆಯಲ್ಲಿ ಭಾಗಿಗಳಾಗಿದ್ದರೆ ಈಗ ಅವೈಜ್ಞಾನಿಕ ಎಂದು ಹೇಳುವ ತೀರ್ಮಾನಕ್ಕೆ ಆಗಲೆ ತಡೆ ಬೀಳುತ್ತಿತ್ತು.

ಅಕ್ಟೋಬರ್ 17 ರಂದು ಮುಕ್ಕ, ಬಿಸಿ ರೋಡ್ ಹೆದ್ದಾರಿ ನಿರ್ಮಾಣಕ್ಕೆ ಹಣಕಾಸು ಒದಗಿಸಿರುವ ಬ್ಯಾಂಕರ್ ಗಳ ಸಭೆ ಮಂಗಳೂರಿನಲ್ಲಿ ನಡೆದಿತ್ತು. ಆಗಲೂ ಉಸ್ತುವಾರಿ ಸಚಿವರಾದ ಮಾನ್ಯ ಸು‌ನಿಲ್ ಕುಮಾರ್ ಸಭೆಯಲ್ಲಿ ಭಾಗಿಯಾಗಿ ವಿವರಗಳನ್ನು ಪಡೆದುಕೊಳ್ಳದಿದ್ದದ್ದು ಯಾಕೆ ?

ಈ ಎಲ್ಲಾ ಸಭೆಗಳ ನಡಾವಳಿ, ಪ್ರಸ್ತಾವನೆಗಳ ಆಧಾರದಲ್ಲಿ ಹೆದ್ದಾರಿ ಪ್ರಾಧಿಕಾರವು ಹೆಜಮಾಡಿ ನವಯುಗ್ ಟೋಲ್ ಗೇಟ್ ನೊಂದಿಗೆ ವಿಲೀನ ಹಾಗೂ ಪರಿಷ್ಕೃತ ದರಪಟ್ಟಿಯೊಂದಿಗೆ ರಾಜ್ಯ ಸರಕಾರಕ್ಕೆ ಪ್ರಸ್ತಾವನೆಯನ್ನು ಅನುಮೋದನೆಗಾಗಿ ಕಳುಹಿಸಿಕೊಟ್ಟಿತ್ತು. ಆ ಪ್ರಸ್ತಾವನೆಯ ಕುರಿತು ತೀರ್ಮಾನ ಕೈಗೊಳ್ಳಲು ಅಕ್ಟೋಬರ್ 28 ರಂದು ರಾಜ್ಯ ಸರಕಾರ ಬೆಂಗಳೂರಿನಲ್ಲಿ ಹೆದ್ದಾರಿ ಪ್ರಾಧಿಕಾರದ ಸಭೆ ನಡೆಸಿ ಯಾವುದೇ ತಕರಾರು, ಅಕ್ಷೇಪಗಳನ್ನು ಎತ್ತದೆ ಪ್ರಸ್ತಾವನೆಗೆ ಅನುಮೋದನೆಯನ್ನು ನೀಡಿತು. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಬಹುದೊಡ್ಡ ಸಮಸ್ಯೆಯ ಕುರಿತಾದ ರಾಜ್ಯ ಸರಕಾರದ ಮಟ್ಟದ ಸಭೆ ನಡೆಯುವಾಗ ಸಂಪುಟ ದರ್ಜೆಯ ಸಚಿವರಾಗಿ, ದ.ಕ.ಜಿಲ್ಲಾ ಉಸ್ತುವಾರಿ ಸಚಿವರಾಗಿ ಸುನಿಲ್ ಕುಮಾರ್ ಅವರ ಪಾತ್ರ ಏನಿತ್ತು ? ಸಭೆ ನಡೆಯುವ ಮಾಹಿತಿಯೇ ಅವರಿಗೆ ಇರಲಿಲ್ಲವೆ ?

ಈ ಎಲ್ಲಾ ಸಂದರ್ಭದಲ್ಲಿ ತಮಗೂ, ಸುರತ್ಕಲ್ ಅಕ್ರಮ ಟೋಲ್ ಗೇಟ್ ಸಮಸ್ಯೆಗೂ ಯಾವುದೇ ಸಂಬಂಧ ಇಲ್ಲ ಎಂದು ಮೌನ ವಹಿಸಿದ್ದು ಈಗ ತಾವು ಹೇಳುತ್ತಿರುವ “ಅವೈಜ್ಞಾನಿಕ” ಎಂಬ ಆದೇಶಗಳು ಹೊರಡಲು ಕಾರಣವಲ್ಲವೆ ?

ಇನ್ನು ಸುರತ್ಕಲ್ ಟೋಲ್ ಸುಂಕದ ಬಾಕಿ ಮೊತ್ತ ಸಂಗ್ರಹಕ್ಕೆ ತಾವು ಸೂಚಿಸುತ್ತಿರುವ “ಮೂರು ಟೋಲ್ ಗೇಟ್ ಗಳಲ್ಲಿ ಹಂಚಿಕೆ ಮಾಡಿ ಸಂಗ್ರಹಿಸುವ” ಪರಿಹಾರವೇ ಅವೈಜ್ಞಾನಿಕತೆಯಿಂದ ಕೂಡಿದೆ ಮಾನ್ಯ ಸುನಿಲ್ ಕುಮಾರ್ ಅವರೆ.

ಮಂಜೇಶ್ವರ ಭಾಗದಿಂದ ಮಂಗಳೂರು ಕಡೆಗೆ ತೆರಳುವ 90 ಶೇಕಡಾ ವಾಹನಗಳು ನಂತೂರು ಸುರತ್ಕಲ್ ರಸ್ತೆಯನ್ನು ಪ್ರವೇಶಿಸುವುದಿಲ್ಲ, ಹಾಗೆಯೆ ಮಂಗಳೂರು, ತೊಕ್ಕೊಟು ಭಾಗದಿಂದ ತಲಪಾಡಿ ಟೋಲ್ ಗೇಟ್ ದಾಟುವ ವಾಹನಗಳು ನಂತೂರು, ಸುರತ್ಕಲ್ ರಸ್ತೆಯನ್ನು ಬಳಸಿರುವುದಿಲ್ಲ. ಬಿಸಿ ರೋಡ್ ನಲ್ಲಿರುವ ಬ್ರಹ್ಮರ ಕೂಟ್ಲು ಟೋಲ್ ಗೇಟ್ ದಾಟುವ ವಾಹನಗಳ ಸ್ಥಿತಿಯೂ ಸರಾಸಾರಿ ಹೀಗೆಯೆ ಇದೆ. ನಿಮ್ಮ ಹಂಚಿಕೆ ನೀತಿಯನ್ನು ಹೆದ್ದಾರಿ ಪ್ರಾಧಿಕಾರ ಒಪ್ಪಿಕೊಂಡರೆ ಈ ವಾಹನ ಸವಾರರು ತಾವು ಬಳಸದೇ ಇರುವ ಸುರತ್ಕಲ್, ನಂತೂರು ರಸ್ತೆಗೆ ಅನ್ಯಾಯವಾಗಿ ಬ್ರಹ್ಮರ ಕೂಟ್ಲು, ತಲಪಾಡಿ ಟೋಲ್ ಪ್ಲಾಜಾದಲ್ಲಿ ಹೆಚ್ಚುವರಿ ಸುಂಕ ಕಟ್ಟಬೇಕಾಗುತ್ತದೆ. ಇದು ಅವೈಜ್ಞಾನಿಕ ಮಾತ್ರ ಅಲ್ಲ, ಬಲವಂತದ ಸುಲಿಗೆಯೂ ಆಗುತ್ತದೆ ಎಂಬುದನ್ನು ತಮ್ಮ ಗಮನಕ್ಕೆ ತರುತ್ತಿದ್ದೇವೆ.

ಈ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಇರುವುದು ಒಂದೇ ದಾರಿ. ತಪ್ಪು ಮಾಡಿರುವುದು ಅಕ್ರಮ ಟೋಲ್ ಗೇಟ್ ಹಾಕಿರುವ ಹೆದ್ದಾರಿ ಪ್ರಾಧಿಕಾರ. ಹೆದ್ದಾರಿ ಪ್ರಾಧಿಕಾರ ಹಾಗೂ ರಾಜ್ಯ ಸರಕಾರ ಸೇರಿಕೊಂಡು ತಾವು ಹೇಳುತ್ತಿರುವ ಕೆಲವು ಕೋಟಿ ರೂಪಾಯಿ ಉಳಿಕೆ ಮೊತ್ತವನ್ನು ಭರಿಸುವುದು, ನಂತೂರು, ಸುರತ್ಕಲ್ ಹೆದ್ದಾರಿಯನ್ನು ಟೋಲ್ ಮುಕ್ತ ರಸ್ತೆ ಎಂದು ಘೋಷಿಸುವುದು.

Related Posts

Leave a Reply

Your email address will not be published.