ತುಳುನಾಡ ದೈವರಾಧನಾ ರಕ್ಷಣಾ ಚಾವಡಿ ವಾರ್ಷಿಕೋತ್ಸವ
ಮೂಡುಬಿದಿರೆ : ದೈವರಾಧನೆ ತುಳುನಾಡಿನ ಪರಂಪರೆ, ನಾವು ದೈವ-ದೇವರನ್ನು ಆರಾಧಿಸುತ್ತೇವೆ ಇದು ಇಲ್ಲಿನ ಮೂಲ ನಿವಾಸಿಗಳ ಸಂಸ್ಕೃತಿ’ ಎಂದು ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಹೇಳಿದರು.
ಅವರು ವಾಲ್ಪಾಡಿ ಮಾಡದಂಗಡಿ ಶಾಲಾ ವಠಾರದಲ್ಲಿ ನಡೆದ ತುಳುನಾಡ ದೈವರಾಧನೆ ರಕ್ಷಣಾ ಚಾವಡಿ ಮೂಡುಬಿದಿರೆ ವಲಯದ 5ನೇ ವಾರ್ಷಿಕೋತ್ಸವದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.ಕನ್ಯಾನ ಕಣಿಯೂರು, ಶ್ರೀ ಮಹಾಬಲೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿ ಕಮರ್ಷಿಯಲ್ ದೃಷ್ಟಿಕೋನದಿಂದ ದೈವಾರಾಧನೆಯನ್ನು ನೋಡುವುದು ಸರಿಯಲ್ಲ. ದೈವಾರಾಧಕರು ಹಾಗೂ ಅದಕ್ಕೆ ಸಂಬಂಧಪಟ್ಟವರು ಆರಾಧನೆಯ ಮೂಲ ಪರಂಪರೆಯನ್ನು ಮುಂದುವರಿಸಬೇಕು ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಮುಖ್ಯ ಅತಿಥಿಯಾಗಿ ಮಾತನಾಡಿ, ಭಯ-ಭಕ್ತಿ ಎರಡನ್ನೂ ನಮ್ಮಲ್ಲಿ ಮೂಡಿಸುವುದು ದೈವಶಕ್ತಿ, ನಾವು ತಪ್ಪು ದಾರಿಯಲ್ಲಿ, ಸಾಗುವಾಗ ನಾವು ಆರಾಧಿಸುವ ದೈವಗಳು ನಮಗೆ ಎಚ್ಚರಿಗೆ ನೀಡಿ `ನಮ್ಮನ್ನು ಸರಿದಾರಿಗೆ ತೋರಿಸುವ ಶಕ್ತಿಗಳಾಗುತ್ತವೆ. ದೈವ ನರ್ತಕರನ್ನು ನಾವು ದೈವಸ್ವರೂಪಿಗಳಾಗಿ ನೋಡಬೇಕು ಎಂದರು.
ಪುರಸ್ಕಾರ: ಡಾ.ಪ್ರಸಾದ್, ನಾಟಿ ವೈದ್ಯೆ ಚಂದ್ರಾವತಿ ರಮೇಶ್ ಅವರಿಗೆ ಜನಶ್ರೀ ಪುರಸ್ಕಾರ ಹಾಗೂ ಗುತ್ತಿಗೆದಾರರಾದ ಸನತ್ ಬಾಕುಂದೋಡಿ, ಹರೀಶ್ ಕಾಯರಬೆಟ್ಟು ಅವರಿಗೆ ಸಾಧನಶ್ರೀ ಪುರಸ್ಕಾರ ನೀಡಿ ಗೌರವಿಸಲಾಯಿತು.
ದೈವರಾಧನಾ ರಕ್ಷಣಾ ಚಾವಡಿಯ ಮೂಡುಬಿದಿರೆ ವಲಯಾಧ್ಯಕ್ಷ ರತ್ನಾಕರ ಶೆಟ್ಟಿ ವಾಲ್ಪಾಡಿ ಅಧ್ಯಕ್ಷತೆ ವಹಿಸಿದರು. ಕಾರ್ಯದರ್ಶಿ ದಿನೇಶ್ ಪುಚ್ಚಮೊಗರು, ಉಪಾಧ್ಯಕ್ಷ ಚೆನ್ನ ನಲ್ಕೆ, ಕೋಶಾಧಿಕಾರಿ ಜಯ ವಾಲ್ಪಾಡಿ, ಸಾಹಿತಿ ಕೆ.ಕೆ ಪೇಜಾವರ, ಭಾರತ ಸರ್ಕಾರ ರೈಲ್ವೆ ಇಲಾಖೆಯ ಸಲಹಾ ಸಮಿತಿ ಸದಸ್ಯ ಕೆ.ಪಿ ಜಗದೀಶ್ ಅಧಿಕಾರಿ ಮೊದಲಾದವರು ಉಪಸ್ಥಿತರಿದ್ದರು.