ಸರ್ವರಿಗೂ ನ್ಯಾಯ ಕೊಟ್ಟು ಗ್ಯಾರಂಟಿ ಕಾರ್ಡ್ ಶೀಘ್ರದಲ್ಲಿ ಅನುಷ್ಠಾನಕ್ಕೆ : ಯು.ಟಿ ಖಾದರ್

ಉಳ್ಳಾಲ: ಸಮಾಜವನ್ನು ಒಗ್ಗಟ್ಟು ಮಾಡುವ ಮೂಲಕ ಬಿಕ್ಕಟ್ಟು ಮಾಡಲು ಬಿಡದೆ ಮುಂದಿನ ಸರಕಾರ ಕಾರ್ಯಾಚರಿಸಲಿದ್ದು, ಸರ್ವ ಧರ್ಮದವರನ್ನು ಪ್ರೀತಿಸಿಕೊಂಡು ಸರ್ವರಿಗೂ ನ್ಯಾಯ ಕೊಟ್ಟು ಗ್ಯಾರಂಟಿ ಕಾರ್ಡ್ ಅತಿಶೀಘ್ರದಲ್ಲಿ ಅನುಷ್ಠಾನಕ್ಕೆ ತರಲಾಗುವುದು ಎಂದು ಶಾಸಕ ಯು.ಟಿ ಖಾದರ್ ಹೇಳಿದ್ದಾರೆ.

ತೊಕ್ಕೊಟ್ಟುವಿನಿಂದ ಉಳ್ಳಾಲಕ್ಕೆ ಬೈಕ್ ರ್‍ಯಾಲಿ ಮತ್ತು ರೋಡ್ ಷೋನಲ್ಲಿ ಭಾಗವಹಿಸಿ ತೊಕ್ಕೊಟ್ಟು ಕೊರಗಜ್ಜನ ಕಟ್ಟೆ ಮತ್ತು ಉಳ್ಳಾಲ ಸೈಯದ್ ಮದನಿ ದರ್ಗಾ ಭೇಟಿ ನೀಡಿ ಮಾಧ್ಯಮದ ಜತೆಗೆ ಮಾತನಾಡಿದರು.

ರಾಜ್ಯದಲ್ಲಿ ದ್ವೇಷಪೂರಕ, ತಾರತಮ್ಯದ ಸರಕಾರವನ್ನು ಎಲ್ಲಾ ಧರ್ಮೀಯರು ಸೇರಿಕೊಂಡು ಕೆಳಗಿಳಿಸಿರುವುದು ಜನರಿಗೆ ಸಿಕ್ಕ ಜಯ.ಬೆಲೆ ಏರಿಕೆ, ಕಾನೂನು ಹೇರಿಕೆ, ತಾರತಮ್ಯ, ಜಾತಿ ದ್ವೇಷಗಳ ಮೂಲಕ ರಾಜ್ಯದ ಜನತೆಯನ್ನು ಒತ್ತಡ, ದಬ್ಬಾಳಿಕೆಗೆ ಸರಕಾರ ಒಳಪಡಿಸಿತ್ತು. ಇದೆಲ್ಲವನ್ನು ಹೋಗಲಾಡಿಸಲು ಜನತೆ ದಿಟ್ಟ ನಿರ್ಧಾರ ತೆಗೆದುಕೊಂಡಿರುವುದು ಸಂತಸ ತಂದಿದೆ. ಅಭಿವೃದ್ಧಿ, ಸೌಹಾರ್ದ, ಸ್ವಾಭಿಮಾನಯುತ ರಾಜ್ಯ ನಿರ್ಮಾಣ ನೂತನ ಸರಕಾರದ ಉದ್ದೇಶ. ಐದನೇ ಬಾರಿಗೆ ವಿಶ್ವಾಸ ಇಟ್ಟುಕೊಂಡು ಆಯ್ಕೆಗೊಳಿಸಿರುವುದಕ್ಕೆ ಕ್ಷೇತ್ರದ ಜನತೆಗೆ ಅಭಿನಂದನೆಗಳು. ವಿಶ್ವಾಸ, ಪ್ರೀತಿಗೆ ಅನುಗುಣವಾಗಿ ಮತದಾರರು, ಹಿರಿಯರಿಗೆ ಗೌರವಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಕ್ಷೇತ್ರವನ್ನು ಮುನ್ನೆಡೆಸುತ್ತೇನೆ. ಶಾಸಕನಾಗಿ ಆಯ್ಕೆಯಾಗಿರುವೆ, ನಾಲ್ಕು ಬಾರಿ ಸಚಿವ, ಪ್ರತಿಪಕ್ಷದ ಉಪನಾಯಕ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸಿರುವೆ. ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಪಕ್ಷದ ಹೈಕಮಾಂಡ್ ನೀಡುವ ಸ್ಥಾನಕ್ಕೆ ಬದ್ಧನಾಗಿ ಕಾರ್ಯನಿರ್ವಹಿಸುತ್ತೇನೆ ಎಂದರು.

ಈ ಸಂದರ್ಭ ಉಳ್ಳಾಲ ದರ್ಗಾ ಅಧ್ಯಕ್ಷ ಹನೀಫ್, ಕಾಂಗ್ರೆಸ್ ಅಲ್ಪಸಂಖ್ಯಾತ ಮುಖಂಡ ಎನ್.ಎಸ್ ಕರೀಂ, ದರ್ಗಾ ಸಮಿತಿ ಸದಸ್ಯರು ಮೊದಲಾದವರು ಭಾಗಿಯಾಗಿದ್ದರು.

Related Posts

Leave a Reply

Your email address will not be published.