ಆತ್ರಾಡಿ ಗ್ರಾ.ಪಂ ಸದಸ್ಯನಿಂದ ಮಹಿಳೆ ಮತ್ತಾಕೆಯ ಮಗಳ ಮೇಲೆ ಹಲ್ಲೆ!
ಉಡುಪಿ: ಉಡುಪಿ ಸಮೀಪದ ಆತ್ರಾಡಿ ಗ್ರಾಮ ಪಂಚಾಯತ್ ಸದಸ್ಯನೋರ್ವ ಮಹಿಳೆ ಮತ್ತು ಆಕೆಯ ಮಗಳ ಮೇಲೆ ಮಾರಣಾಂತಿವಾಗಿ ಹಲ್ಲೆ ನಡೆಸಿದ ಪ್ರಸಂಗ ನಡೆದಿದೆ. ಖಾಸಗಿ ಜಾಗದಲ್ಲಿ ರಸ್ತೆ ನಿರ್ಮಿಸಲು ತಡೆಯೊಡ್ಡಿದ್ದಕ್ಕಾಗಿ ಮಹಿಳೆ ಮತ್ತು ಆಕೆಯ ಮಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ.
ಆತ್ರಾಡಿ ಪರೀಕದ ಪಡುಮನೆ ನಾಗಬನ ನಿವಾಸಿ ಆರತಿ (45) ಹಲ್ಲೆಗೊಳಗಾದ ಮಹಿಳೆಯಾಗಿದ್ದು,ಆರತಿಯವರ ಹೆಸರಿನಲ್ಲಿರುವ ಜಾಗದಲ್ಲಿ ಆತ್ರಾಡಿ ಗ್ರಾಮ ಪಂಚಾಯತ್ ವಿರೋಧದ ನಡುವೆಯೂ ಕಾಂಕ್ರೀಟ್ ರಸ್ತೆ ನಿರ್ಮಿಸಲು ತಯಾರು ನಡೆಸಿದ್ದರು. ಮನೆಯವರ ಆಕ್ಷೇಪ ಇದ್ದರೂ ರಸ್ತೆ ಕಾಮಗಾರಿಗೆ ಪ್ರಾರಂಭಿಸಿದ್ದನ್ನು ಆರತಿ ಪ್ರಶ್ನಿಸಿದ್ದಾರೆ.ಈ ವೇಳೆ ಮಾತಿಗೆ ಮಾತು ಬೆಳೆದು ಸ್ಥಳದಲ್ಲಿದ್ದ ಪಂಚಾಯತ್ ಸದಸ್ಯ ರತ್ನಾಕರ್ ಶೆಟ್ಟಿ ಈಶ್ವರನಗರ ಮತ್ತು ಮನೆ ಪಕ್ಕದ ಚಂದ್ರಹಾಸ ಶೆಟ್ಟಿ, ಸಂತೋಷ ಪೂಜಾರಿ ಆರತಿಯವರಿಗೆ ಹಲ್ಲೆ ನಡೆಸಿದ್ದಾರೆ. ವಾಗ್ವಾದದ ಸಂದರ್ಭ ರತ್ನಾಕರ್ ಶೆಟ್ಟಿ ಎಂಬಾತ ಆರತಿಯವರನ್ನು ತಳ್ಳಿದ ಪರಿಣಾಮ ಅವರ ತಲೆಗೆ ಗಂಭೀರ ಗಾಯವಾಗಿದೆ. ತಡೆಯಲು ಬಂದ ಆರತಿ ಅವರ ಮಗಳ ಮೇಲೂ ಹಲ್ಲೆ ನಡೆಸಲಾಗಿದೆ.
ಆರತಿ ಅವರು ಉಡುಪಿ ಜಿಲ್ಲಾ ಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಹಿರಿಯಡಕ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದೆ.