ಅನಾಥ ವೃದ್ಧರಿಗೆ ಆಶ್ರಯ ನೀಡೋರಿಲ್ಲ : ಜಿಲ್ಲಾಧಿಕಾರಿಗಳಿಗೆ ಮೊರೆ ಹೋದ ಸಾಮಾಜಿಕ ಕಾರ್ಯಕರ್ತರು
ಉಡುಪಿ: ಕೋಟ ಠಾಣಾ ವ್ಯಾಪ್ತಿಯಲ್ಲಿ 20 ದಿನಗಳ ಹಿಂದೆ ಕಾಲಿಗೆ ಗಾಯವಾಗಿ, ಅನಾರೋಗ್ಯ ಪೀಡಿತರಾಗಿ ಅನಾಥ ಸ್ಥಿತಿಯಲ್ಲಿದ್ದ ಹಿರಿಯ ವೃದ್ಧರನ್ನು ವಿಶು ಶೆಟ್ಟಿ ಅವರು ರಕ್ಷಿಸಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆಯ ಬಳಿಕ ಗುಣಮುಖರಾಗಿರುವ ಅವರನ್ನು ಎಲ್ಲಿಗೆ ಸೇರಿಸೋದು ಎಂಬ ಧರ್ಮ ಸಂಕಟ ಸಾಮಾಜಿಕ ಕಾರ್ಯಕರ್ತರನ್ನು ಕಾಡುತ್ತಿದೆ !
ವೃದ್ಧರನ್ನು ಆಸ್ಪತ್ರೆಗೆ ದಾಖಲಿಸಿದ ವಿಶು ಶೆಟ್ಟಿ ಅವರಿಗೆ ವೃದ್ಧರನ್ನು ಕರೆದುಕೊಂಡು ಹೋಗುವಂತೆ ಜಿಲ್ಲಾಸ್ಪತ್ರೆಯಿಂದ ಕರೆ ಬಂದಿದೆ. ವೃದ್ಧರ ವಾರೀಸುದಾರರು ಸ್ಪಂಧಿಸದ ಕಾರಣ ಅವರನ್ನು ಎಲ್ಲಿಗೆ ಸೇರಿಸೋದು ಎಂಬ ಗಂಭೀರ ಪ್ರಶ್ನೆ ಎದುರಾಗಿದೆ.
ಉಡುಪಿಯ ಉಚಿತ ಅನಾಥಾಶ್ರಮಗಳೆಲ್ಲಾ ಬಹುತೇಕ ತುಂಬಿ ಹೋಗಿವೆ. ಸರಕಾರಿ ಅನಾಥಾಶ್ರಮಗಳಿಲ್ಲ. ಹೀಗಾಗಿ ದಾರಿ ಕಾಣದೆ ವಿಶು ಶೆಟ್ಟಿ ಅವರು ತಮ್ಮದೇ ಖರ್ಚಿನಲ್ಲಿ ವೃದ್ಧರನ್ನು ತಾತ್ಕಾಲಿಕವಾಗಿ ಖಾಸಗಿ ಆಶ್ರಮಕ್ಕೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.
ಆದರೆ ಖಾಸಗಿ ಆಶ್ರಮದ ದುಬಾರಿ ವೆಚ್ಚವನ್ನು ಪ್ರತೀ ತಿಂಗಳು ಭರಿಸುವುದು ಅಸಾಧ್ಯವಾದ ಕೆಲಸ. ಹೀಗಾಗಿ ವೃದ್ಧರಿಗೆ ಆಶ್ರಯ ಕಲ್ಪಿಸಲು ಜಿಲ್ಲಾಡಳಿತ, ಸಂಬಂಧ ಪಟ್ಟ ಇಲಾಖೆ ಈ ಬಗ್ಗೆ ತುರ್ತಾಗಿ ನಿರ್ಧಾರಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಮಾನವೀಯ ನೆಲೆಯಲ್ಲಿ ಅನಾಥರನ್ನು, ನೊಂದವರನ್ನು ಆಸ್ಪತ್ರೆಗಳಿಗೆ ದಾಖಲಿಸಿದಾಗ, ದಾಖಲಿಸಿದವರೇ ಅವರ ಆಗುಹೋಗುಗಳಿಗೆ ಜವಾಬ್ದಾರರಾದರೆ ಮುಂದೆ ಸಮಾಜದಲ್ಲಿ ಅನಾಥರಿಗೆ ಸಹಾಯ ಹಸ್ತ ಚಾಚಲು ಯಾರೂ ಮುಂದೆ ಬರಲಾರರು. ಜಿಲ್ಲಾಡಳಿತ, ಇಲಾಖಾಧಿಕಾರಿಗಳು ಈ ಗಮನ ಹರಿಸಬೇಕು ಎಂದು ಅವರು ತಿಳಿಸಿದ್ದಾರೆ.