ಉಡುಪಿಯಲ್ಲಿ ವಿಶ್ವ ಹೃದಯ ದಿನದ ಅಂಗವಾಗಿ ಆದರ್ಶ ಆಸ್ಪತ್ರೆ ವತಿಯಿಂದ ಜಾಥಾ
ಉಡುಪಿಯ ಆದರ್ಶ ಆಸ್ಪತ್ರೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಸ್ಪತ್ರೆ ಹಾಗೂ ಜಿಲ್ಲಾ ಸರ್ವೇಕ್ಷಣಾ ಘಟಕ ಉಡುಪಿ ಇದರ ಆಶ್ರಯದಲ್ಲಿ ವಿಶ್ವ ಹೃದಯ ದಿನದ ಅಂಗವಾಗಿ ಬೃಹತ್ ಜಾಥಾ ನಡೆಯಿತು.
ಇದರ ಉದ್ಘಾಟನಾ ಸಮಾರಂಭವು ಉಡುಪಿಯ ಜಿಲ್ಲಾಸ್ಪತ್ರೆಯಲ್ಲಿ ಜರುಗಿತ್ತು. ಈ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಉಡುಪಿ ಶಾಸಕ ಕೆ. ರಘುಪತಿ ಭಟ್, ಸಾತ್ವಿಕ ಜೀವನ ಶೈಲಿ, ಆಹಾರ ಪದ್ಧತಿಯನ್ನು ಅನುಸರಿಸುವ ಮೂಲಕ ಹೃದ್ರೋಗದ ಬಗ್ಗೆ ವೈದ್ಯರು ನೀಡಿದ ಸಲಹೆಗಳನ್ನು ಪಾಲಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿದರು.
ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಟ್ಟಾರು ರತ್ನಾಕರ ಹೆಗ್ಡೆ, ಮೈಸೂರು ಎಲೆಕ್ಟ್ರಿಕಲ್ & ಇಂಡಸ್ಟ್ರೀಸ್ ಅಧ್ಯಕ್ಷರಾದ ಉದಯ ಕುಮಾರ್ ಶೆಟ್ಟಿ, ಡಿಎಚ್‌ಒ ಡಾ| ನಾಗಭೂಷಣ್ ಉಡುಪ, ಜಿಲ್ಲಾ ಸರ್ಜನ್ ಡಾ| ಮಧುಸೂದನ್ ನಾಯಕ್, ಮೀನು ಮಾರಾಟ ಫೆಡರೇಶನ್ ಅಧ್ಯಕ್ಷರಾದ ಯಶಪಾಲ್ ಸುವರ್ಣ, ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷರಾದ ಅಂಡಾರು ದೇವಿಪ್ರಸಾದ್ ಶೆಟ್ಟಿ, ಜಿ. ಪಂ. ಮಾಜಿ ಅಧ್ಯಕ್ಷರಾದ ದಿನಕರ ಬಾಬು, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಡಿ. ಬಾಲಕೃಷ್ಣ ಶೆಟ್ಟಿ, ಸದಸ್ಯರಾದ ಟಿ. ಜಿ. ಹೆಗ್ಡೆ, ರಜನಿ ಹೆಬ್ಬಾರ್, ಚಂದ್ರಶೇಖರ್ ಶೇರಿಗಾರ್, ಪ್ರಭಾಕರ ಪೂಜಾರಿ, ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್, ಪ್ರಮುಖರಾದ ಗೀತಾಂಜಲಿ ಸುವರ್ಣ, ವೀಣಾ ಎಸ್. ಶೆಟ್ಟಿ ಸಭಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಆದರ್ಶ ಆಸ್ಪತ್ರೆ ಹೃದ್ರೋಗ ತಜ್ಞರಾದ ಡಾ| ಶ್ರೀಕಾಂತ್ ಮಾತನಾಡಿದರು. ಆದರ್ಶ ಆಸ್ಪತ್ರೆ ವೈದ್ಯಕೀಯ ನಿರ್ದೇಶಕರಾದ ಡಾ| ಜಿ. ಎಸ್. ಚಂದ್ರಶೇಖರ್ ಸ್ವಾಗತಿಸಿ ಪ್ರಸ್ತಾವಿಸಿದರು. ಉಡುಪಿ ಜಿಲ್ಲಾಸ್ಪತ್ರೆಯ ಹಿರಿಯ ಚಿಕಿತ್ಸಾ ಮೇಲ್ವಿಚಾರಕರಾದ ಪ್ರಶಾಂತ್ ಶೆಟ್ಟಿ ನಿರೂಪಿಸಿದರು.
ಸಮಾರಂಭದ ಬಳಿಕ ಜಾಥಾವು ಅಜ್ಜರಕಾಡು ಜೋಡುಕಟ್ಟೆ, ಬಿಗ್ ಬಜಾರ್, ಡಯಾನ ಸರ್ಕಲ್, ಕೆ. ಎಂ ಮಾರ್ಗದಲ್ಲಿ ಸಾಗಿ ಬಂದು ಕ್ಲೋಕ್ ಟವರ್ ತಿರುವು ಪಡೆದು ಆದರ್ಶ ಆಸ್ಪತ್ರೆಯಲ್ಲಿ ಸಮಾಪನಗೊಂಡಿತು. ಜಾಥಾದಲ್ಲಿ ವಿವಿಧ ನರ್ಸಿಂಗ್ ಕಾಲೇಜುಗಳ ಸರಿಸುಮಾರು ೧೮೦೦ ವಿದ್ಯಾರ್ಥಿಗಳು ಭಾಗವಹಿಸಿದ್ದು, ಹೃದ್ರೋಗದ ಬಗ್ಗೆ ಮಾಹಿತಿ ನೀಡುವ ಹಾಗೂ ಜಾಗೃತಿ ಮೂಡಿಸುವ ವಿವಿಧ ಫಲಕಗಳ ಪ್ರದರ್ಶನ, ವ್ಯಾಯಾಮ, ಹೃದಯ ಸ್ತಂಭನವಾದಾಗ ಅನುಸರಿಸಬೇಕಾದ ಕ್ರಮಗಳ ಪ್ರಾತ್ಯಕ್ಷಿತೆ ಇತ್ಯಾದಿಗಳನ್ನು ಪ್ರದರ್ಶಿಸಿದರು. ಈ ಜಾಥಾದಲ್ಲಿ ವೈದ್ಯರು, ಗಣ್ಯ ವ್ಯಕ್ತಿಗಳು ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.
ಬೃಹತ್ ಜಾಥಾದ ನಂತರ ಆಸ್ಪತ್ರೆಯಲ್ಲಿ ಹೃದ್ರೋಗ ತಜ್ಞರಿಂದ ಉಚಿತ ಆರೋಗ್ಯ ತಪಾಸಣೆ, ರಕ್ತದ ಸಕ್ಕರೆ ಅಂಶ, ಕೊಬ್ಬಿನಾಂಶ ಹಾಗೂ ಇ ಸಿ ಜಿ ಪರೀಕ್ಷೆಗಳನ್ನು ಉಚಿತವಾಗಿ ಹಾಗೂ ಹೃದಯದ ಆಂಜಿಯೋಗ್ರಾಮ್ ಹಾಗೂ ಆಂಜಿಯೋಪ್ಲಾಸ್ಟಿ ಚಿಕಿತ್ಸೆಯನ್ನು ರಿಯಾಯಿತಿ ದರದಲ್ಲಿ ಮಾಡಿಕೊಡಲಾಯಿತು. ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಪಾಲ್ಗೊಂಡು, ಎಲ್ಲಾ ಉಚಿತ ಸೇವೆಗಳ ಉಪಯೋಗವನ್ನು ಪಡೆದುಕೊಂಡರು.