ಉಡುಪಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆ
ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಉಡುಪಿ ನಗರಸಭೆ ವ್ಯಾಪ್ತಿಯ ಹಲವೆಡೆ ಮನೆಗಳು ಜಲಾವೃತಗೊಂಡಿದೆ.ಕರಂಬಳ್ಳಿ, ಮೂಡುನಿಡಂಬೂರು, ಕೊಡವೂರು ಭಾಗದಲ್ಲಿ ನೆರೆ ಸೃಷ್ಟಿಯಾಗಿದೆ. ಕರಂಬಳ್ಳಿ ಭಾಗದಲ್ಲಿ, ಬನ್ನಂಜೆ ಮೂಡನಿಡಂಬೂರು ಕೆಲವು ಮನೆಗಳು ಜಲಾವೃತಗೊಂಡಿದೆ. ಇಂದ್ರಾಣಿ ನದಿ ಹರಿಯುವ ಪಾತ್ರದಲ್ಲಿ ಗುಂಡಿಭಾಗದಲ್ಲಿ ತೋಟ, ಗದ್ದೆಗಳು ಜಲಾವೃತಗೊಂಡಿದೆ.
ಭಾರಿ ಮಳೆಯಿಂದ ನಗರದಲ್ಲಿನ ಮಳೆನೀರು ತೋಡು ತುಂಬಿ ಹರಿಯುತ್ತಿದ್ದು ಇದರಿಂದ ಈ ಪರಿಸರದ ಹತ್ತಾರು ಮನೆಗಳು ಜಲಾವೃತಗೊಳ್ಳುವ ಆತಂಕ ಎದುರಾಗಿದೆ. ಕೆಲವು ಕಡೆಗಳಲ್ಲಿ ಎದುರಿನ ಅಂಗಳದಲ್ಲಿ ನಿಲ್ಲಿಸಲಾದ ಬೈಕ ಕಾರುಗಳು ಕೂಡ ನೀರು ಪಾಲಾಗುತ್ತಿದೆ. ಈ ಮನೆಗಳ ಮಕ್ಕಳು ಶಾಲೆಗೆ ತೆರಳಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆ ಕೂಡ ಜಲಾವೃತ ಗೊಂಡಿರುವುದರಿಂದ ವಾಹನ ಸಂಚಾರಕ್ಕೂ ಅಡ್ಡಿಯಾಗುತ್ತಿದೆ.