ರಂಗಭೂಮಿ ರಂಗೋತ್ಸವ’ ಉದ್ಘಾಟನಾ ಕಾರ್ಯಕ್ರಮದ
ಉಡುಪಿ : ಉಡುಪಿಯ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ರಂಗಭೂಮಿ ಉಡುಪಿ ಸಂಸ್ಥೆ ವತಿಯಿಂದ ಹಮ್ಮಿಕೊಂಡ ನಾಲ್ಕು ದಿನಗಳ ‘ರಂಗಭೂಮಿ ರಂಗೋತ್ಸವ’ದ ಉದ್ಘಾಟನಾ ಕಾರ್ಯಕ್ರಮದಲ್ಲಿ ಹಾವೇರಿಯ ಕರ್ನಾಟಕ ಜಾನಪದ ವಿಶ್ವ ವಿದ್ಯಾಲಯದ ಗೌರವ ಡಾಕ್ಟರೇಟ್ ಪಡೆದಿರುವ ಸಂಸ್ಥೆಯ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರಿಗೆ ರಂಗಭೂಮಿ ಉಡುಪಿ ವತಿಯಿಂದ ಗೌರವಾರ್ಪಣೆ ಬುಧವಾರ ನಡೆಯಿತು. ಡಾ. ತಲ್ಲೂರು ಅವರನ್ನು ಸನ್ಮಾನಿಸಿದ ಮಾಹೆ ಸಹಕುಲಾಪತಿ ಡಾ. ಎಚ್. ಎಸ್. ಬಲ್ಲಾಳ್ ಅವರು ರಂಗಭೂಮಿ ಉಡುಪಿ ಸಂಸ್ಥೆಯ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರ ಸಾಧನೆಗಳನ್ನು ಪ್ರಶಂಸಿದರು. ತಲ್ಲೂರು ಶಿವರಾಮ ಶೆಟ್ಟರು ಎಂದರೆ ನಮಗೆಲ್ಲಾ ತುಂಬಾ ಅಭಿಮಾನ. ಏಕೆಂದರೆ ಅವರು ಸಾಮಾನ್ಯ ಕುಟುಂಬದಿಂದ ಬಂದು ತಮ್ಮ ಸಾಧನೆಯ ಮೂಲಕ ಎತ್ತರಕ್ಕೇರಿದವರು. ಮಾನವನಿಗೆ ಮಹತ್ವಾಕಾಂಕ್ಷೆ ಬೇಕು. ಅದನ್ನು ಸಾಧಿಸುವ ಛಲ ಬೇಕು. ಇದಕ್ಕೆ ಡಾ.ತಲ್ಲೂರು ಉತ್ತಮ ನಿದರ್ಶನ ಎಂದರು. ಅವರ ಮುಂದಾಳುತ್ವದಲ್ಲಿ ರಂಗಭೂಮಿ ಉತ್ತಮ ಕಾರ್ಯವನ್ನು ನಡೆಸುತ್ತಿದೆ. ಈ ಯಶೋಗಾಥೆ ಹೀಗೆಯೇ ಮುಂದವರಿಯಲಿ ಎಂದು ಹಾರೈಸಿದರು. ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅವರು ಡಾ. ತಲ್ಲೂರು ಅವರ ನೇತೃತ್ವದಲ್ಲಿ ರಂಗಭೂಮಿ ಸಂಸ್ಥೆ ಇನ್ನಷ್ಟು ಎತ್ತರಕ್ಕೇರಲಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ. ಲಕ್ಷ್ಮೀನಾರಾಯಣ ಕಾರಂತ,ಉದ್ಯಮಿ ಪ್ರಸಾದ್‌ರಾಜ್ ಕಾಂಚನ್, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪ್ರದೀಪ್‌ಚಂದ್ರ ಕುತ್ಪಾಡಿ, ಉಪಾಧ್ಯಕ್ಷರುಗಳಾದ ಭಾಸ್ಕರ ರಾವ್ ಕಿದಿಯೂರು, ಎನ್. ಆರ್. ಬಲ್ಲಾಳ್ ಉಪಸ್ಥಿತರಿದ್ದರು. ಜತೆ ಕಾರ್ಯದರ್ಶಿ ವಿವೇಕಾನಂದ ಎನ್. ನಿರೂಪಿಸಿ. ಅಮಿತಾಂಜಲಿ ಕಿರಣ್ ವಂದಿಸಿದರು.