ಉಡುಪಿ : ಎಪ್ರಿಲ್ 5ರಂದು ಪತ್ರಕರ್ತರ ಸಂಘದ ರಜತ ಮಹೋತ್ಸವ ಸಮಾರೋಪ

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ರಜತ ಮಹೋತ್ಸವ ಸಮಿತಿಯ ವಿಶೇಷ ಸಭೆ ಸಮಿತಿಯ ಸಂಚಾಲಕ ಮುಹಮ್ಮದ್ ಶರೀಫ್ ಕಾರ್ಕಳ ಅಧ್ಯಕ್ಷತೆಯಲ್ಲಿ ಫೆ.18ರಂದು ಉಡುಪಿ ಪತ್ರಿಕಾ ಭವನದಲ್ಲಿ ನಡೆಯಿತು.
ರಜತ ಮಹೋತ್ಸವದ ಸಮಾರೋಪ ಸಮಾರಂಭವನ್ನು ಎಪ್ರಿಲ್ 5ರಂದು ಶನಿವಾರ ಸಂಜೆ ಉಡುಪಿಯ ಓಷಿಯನ್ ಪರ್ಲ್ ಹೊಟೇಲ್ ಸಭಾಂಗಣದಲ್ಲಿ ನಡೆಸಲು ತೀರ್ಮಾನಿಸಲಾಯಿತು. ಇದಕ್ಕೆ ಪೂರ್ವಭಾವಿಯಾಗಿ ಎಲ್ಲ ತಾಲೂಕು ಸಂಘದವರೊಂದಿಗೆ ಸೇರಿ ದಾನಿಗಳಿಂದ ದೇಣಿಗೆ ಸಂಗ್ರಹಿಸುವ ಬಗ್ಗೆ ನಿರ್ಧರಿಸಲಾಯಿತು.
ಸಮಾರೋಪ ಸಮಾರಂಭದಲ್ಲಿ ಕ್ರೀಡಾಕೂಟದ ವಿಜೇತರಿಗೆ ಬಹುಮಾನ ವಿತರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ನಿರ್ಣಯ ಮಾಡಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಜವಾಬ್ದಾರಿಯನ್ನು ಸಾಂಸ್ಕೃತಿಕ ಸಮಿತಿಯ ಸಹಸಂಚಾಲಕ ಶಶಿಧರ್ ಮಾಸ್ತಿಬೈಲು ಅವರಿಗೆ ವಹಿಸಿ ಕೊಡಲಾಯಿತು.
ಸಭೆಯಲ್ಲಿ ಸಮಿತಿಯ ಲೆಕ್ಕಚಾರವನ್ನು ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ ಮಂಡಿಸಿದರು. ಈ ಕುರಿತು ಸದಸ್ಯರು ಚರ್ಚೆ ನಡೆಸಿ, ರಜತ ಮಹೋತ್ಸವ ಸಮಾರೋಪದ ಬಳಿಕ ಸಮಿತಿಗೆ ಸಂಬಂಧಿಸಿದ ಲೆಕ್ಕಚಾರವನ್ನು ಆಡಿಟ್ ಮಾಡಿ ಮಂಡಿಸಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು, ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ, ರಜತ ಮಹೋತ್ಸವ ಸಮಿತಿಯ ಜತೆ ಕಾರ್ಯದರ್ಶಿ ದೀಪಕ್ ಜೈನ್ ಹಾಗೂ ಪದಾಧಿಕಾರಿಗಳು ಹಾಗೂ ತಾಲೂಕು ಸಂಘದ ಅಧ್ಯಕ್ಷರುಗಳು ಹಾಜರಿದ್ದರು.
