ಉಡುಪಿಯಲ್ಲಿ ಕೇವಲ 10 ದಿನ ಕುಡಿಯುವ ನೀರು ಪೂರೈಕೆ ಸಾಧ್ಯ : ಉಡುಪಿ ನಗರಸಭೆ

ಉಡುಪಿ : ಮುಂಗಾರಿನ ಋತು ಪ್ರಾರಂಭವಾದರೂ, ಉಡುಪಿ ಜಿಲ್ಲೆಯ ಕೆಲೆವೆಡೆ ಮಾತ್ರ ಅಲ್ಪ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಆದರೆ ಉಡುಪಿ ನಗರ ಪ್ರದೇಶ ಸೇರಿದಂತೆ ಹಲವೆಡೆ ಕೇವಲ ಮೋಡ ಕವಿದ ವಾತಾವರಣ ಮಾತ್ರ ಭಾಗ್ಯವೆಂಬಂತಿದೆ. ಬಹುತೇಕ ಕಡೆಗಳಲ್ಲಿ ನೀರಿಗೆ ಹಾಹಾಕಾರ ಪಡುವಂತಾಗಿದ್ದು, ಇದೀಗ ನಗರಸಭೆ ವ್ಯಾಪ್ತಿಯಲ್ಲಿ ಇನ್ನು 10 ದಿನ ಮಾತ್ರ ಆಗುವಷ್ಟು ಕುಡಿಯುವ ನೀರು ಪೂರೈಸಲು, ಹಿರಿಯಡಕ ಸ್ವರ್ಣ ನದಿ ಬಜೆ ಡ್ಯಾಂನಲ್ಲಿ ನೀರು ಲಭ್ಯವಿದೆ ಎನ್ನುವ ಮಾಹಿತಿ ಉಡುಪಿ ನಗರಸಭೆ ಹೊರ ಹಾಕಿದೆ. ಪ್ರಸ್ತುತ ಡ್ಯಾಂನಲ್ಲಿ ಎರಡು ಅಡಿ ಮಾತ್ರ ನೀರಿನ ಪ್ರಮಾಣ ಲಭ್ಯವಿದ್ದು, ನೀರನ್ನು ರೇಶನಿಂಗ್ ವ್ಯವಸ್ಥೆಯಡಿಯಲ್ಲಿ ಇನ್ನೂ 10 ದಿನಕ್ಕೆ ವಿತರಿಸಬಹುದಾಗಿದೆ. ಪ್ರಸ್ತುತ ಪುತ್ತಿಗೆ ಪ್ರದೇಶದ ಮೇಲ್ಭಾಗ ಮತ್ತು ಕೆಳಭಾಗದ ಎರಡು ಗುಂಡಿಗಳಲ್ಲಿ ನೀರು ಲಭ್ಯವಿದ್ದು, ಅಲ್ಲಿಂದ ಬಜೆ ಡ್ಯಾಂ ಕಡೆಗೆ ಪಂಪಿಂಗ್ ಮಾಡಿ ನೀರನ್ನು ಹಾಯಿಸಲಾಗುತ್ತಿದೆ. ಒಂದೆ ವೇಳೆ ಪಶ್ಚಿಮಘಟ್ಟ ಭಾಗದಲ್ಲಿ ಮಳೆಯಾದಲ್ಲಿ ಆ ನೀರಿನ ಮೂಲಕ ಸ್ವರ್ಣಾ ನದಿ ತುಂಬಲಿದೆ, ಇಲ್ಲವಾದರೆ ನಾಗರೀಕರು ನೀರಿಗಾಗಿ ಪರದಾಡಬೇಕಾದ ಪರಿಸ್ಥಿತಿ ಎದುರಾಗಲಿದೆ. ಸದ್ಯ ಅತ್ಯಂತ ಅಗತ್ಯ ಇರುವ ಕಡೆಗಳಲ್ಲಿ ನಗರಸಭೆ ಟ್ಯಾಂಕರ್ ಮೂಲಕ ನೀರು ಪೂರೈಸುವ ಜವಾಬ್ದಾರಿ ವಹಿಸಿಕೊಂಡಿದೆ. ಅದರೆ ಶೀಘ್ರದಲ್ಲಿ ಮುಂಗಾರು ಕರಾವಳಿಗೆ ಆಗಮನವಾಗದೆ ಇದ್ದಲ್ಲಿ, ಇಲ್ಲಿನ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆ ಇದೆ.