ಸಾಹಿತ್ಯ ಸಮ್ಮೇಳನದಲ್ಲಿ ಮನತಣಿಸಿದ ತಾಳಮದ್ದಳೆ

ಉಜಿರೆ, : ದಕ್ಷಿಣ ಕನ್ನಡ ಜಿಲ್ಲಾ 25ನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶನಿವಾರ ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪುತ್ತೂರಿನ ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ, ಬೊಳುವಾರು ಇದರ ವತಿಯಿಂದ ತಾಳಮದ್ದಳೆ ನಡೆಯಿತು. ಭಾಸ್ಕರ ಬಾರ್ಯ ಅವರು ನಿರ್ದೇಶಿಸಿರುವ ‘ಯಕ್ಷಭ್ರಾತೃ’ ಪ್ರಸಂಗವನ್ನು ಪ್ರಸ್ತುತಪಡಿಸಲಾಯಿತು. ಇವರು ಕಳೆದ 17 ವರ್ಷಗಳಿಂದ ತಾಳಮದ್ದಳೆ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದಾರೆ. ಈ ತಂಡವು ಮಹಿಳೆಯರ ಭಾಗವತಿಕೆಯಿಂದಲೇ ಪ್ರಸಿದ್ಧಿ ಪಡೆದಿದೆ.
ಹಿಮ್ಮೇಳದಲ್ಲಿ ಭಾಗವತರಾಗಿ ಮುರಳಿಕೃಷ್ಣ ತೆಂಕಬೈಲು, ಚೆಂಡೆಯಲ್ಲಿ ಮುರಳಿಧರ ಕಲ್ಲೂರಾಯ ಕುಂಜೂರುಪಂಜ ಹಾಗೂ ಮದ್ದಳೆಯಲ್ಲಿ ಶಿತಿಕಂಠ ಭಟ್ ಉಜಿರೆ ಸಹಕರಿಸಿದರು. ಮುಮ್ಮೇಳದಲ್ಲಿ ಅರ್ಥಧಾರಿಗಳಾಗಿ ಶುಭಾ ಅಡಿಗ ಶ್ರೀರಾಮನಾಗಿ, ಕಿಶೋರಿ ದುಗ್ಗಪ್ಪ ನಡಂಕಲ್ಲು ಅವರು ಲಕ್ಷ್ಮಣನಾಗಿ, ಶುಭಾ ಗಣೇಶ್ ಶ್ರೀಕೃಷ್ಣನಾಗಿ, ಹರಿಣಾಕ್ಷಿ ಜೆ. ಶೆಟ್ಟಿ ಬಲರಾಮನಾಗಿ ಪಾತ್ರ ನಿರ್ವಹಿಸಿದರು.
ಕಲಾವಿದರನ್ನು ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ ನ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ಅವರು ಸ್ಮರಣಿಕೆ ನೀಡಿ ಗೌರವಿಸಿದರು. ಮುರಳಿಕೃಷ್ಣ ಮೂರ್ತಿ ಕಾರ್ಯಕ್ರಮ ನಿರೂಪಿಸಿದರು.