ದ.ಕ. ಜಿಲ್ಲಾ 25ನೆಯ ಕನ್ನಡ ಸಾಹಿತ್ಯ ಸಮ್ಮೇಳನ
ಉಜಿರೆ, ಫೆ.5: ಇಲ್ಲಿನ ಶ್ರೀ ಕೃಷ್ಣಾನುಗ್ರಹ ಸಭಾಭವನದ ಕುಂಬ್ಳೆ ಸುಂದರ ರಾವ್ ಪ್ರಾಂಗಣದ ಸಾರಾ ಅಬೂಬಕ್ಕರ್ ವೇದಿಕೆಯಲ್ಲಿ ನಡೆಯುತ್ತಿರುವ ಮೂರು ದಿನಗಳ ದ.ಕ. ಜಿಲ್ಲಾ 25ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಕೊನೆಯ ದಿನವಾದ ರವಿವಾರದ ಕಾರ್ಯಕ್ರಮಗಳು ಮುಂಜಾನೆ ಉದಯರಾಗದೊಂದಿಗೆ ಪ್ರಾರಂಭಗೊಂಡವು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಗೂ ಆಕಾಶವಾಣಿ ‘ಎ’ ಗ್ರೇಡ್ ಕಲಾವಿದ ಡಿ.ಬಿ. ಪ್ರಕಾಶ ದೇವಾಡಿಗ ಅವರು ಸ್ಯಾಕ್ಸೋಫೋನ್ ವಾದನದ ಮೂಲಕ ಭಕ್ತಿಭಾವದ ರಾಗಲಹರಿಯನ್ನು ಹರಿಸಿದರು.
ಅತ್ಯಂತ ಸುಶ್ರಾವ್ಯವಾಗಿ ಮಹಾಗಣಪತಿ ಕೃತಿಯ ಭಜಮಾನಸದೊಂದಿಗೆ ಆರಂಭಗೊಂಡ ಸ್ಯಾಕ್ಸೋಫೋನ್ ವಾದನವು ಜಯಜಯ ಪದ್ಮನಾಭ ಕೀರ್ತನೆ, ರಾಜರಾಜಿತೇ ಕೃತಿ, ಹರಿಕುಣಿರಾಗ, ಹರಿಮಣ ಮರಾಠಿ ಭಕ್ತಿ ಗೀತೆ, ಕನ್ನಡದ ನಿತ್ಯೋತ್ಸವ ಮತ್ತು ‘ಭಾಗ್ಯದ ಲಕ್ಷ್ಮೀ’ ಯೊಂದಿಗೆ ರಾಗಸುಧೆ ಹರಿಸಿ ಸಮಾಪ್ತಿಗೊಂಡಿತು. ಮುಖ್ಯ ವಾದಕರಿಗೆ ಸಹ ಸ್ಯಾಕ್ಸೋಫೋನ್ ವಾದಕರಾಗಿ ತ್ಯಾಗರಾಜ್ ಹಾಸನ, ನಾಗಪ್ರಿಯ ಕುತ್ರೊಟ್ಟು ಹಾಗೂ ಜ್ಞಾನಶ್ರೀ ಕುತ್ರೊಟ್ಟು ಜತೆಯಾದರು. ತಬಲಾದಲ್ಲಿ ಗೌರಿ ಪ್ರಸಾದ್ ಹಾಗೂ ಡೊಲ್ಕಿಯಲ್ಲಿ ಪ್ರವೀಣ್ ದೇವಾಡಿಗ ಸಾಥ್ ನೀಡಿದರು.ಎಸ್.ಡಿ.ಎಂ. ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಮಹಾವೀರ್ ಜೈನ್ ಕಾರ್ಯಕ್ರಮ ನಿರ್ವಹಿಸಿ, ಕಲಾವಿದ ಡಿ.ಬಿ. ಪ್ರಕಾಶ ದೇವಾಡಿಗ ಅವರನ್ನು ಸಮ್ಮಾನಿಸಿದರು.