ಉಳ್ಳಾಲ : 2ನೆ ಬ್ಯಾರಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಅಡ್ವಕೇಟ್ ಬಿ.ಎ. ಮುಹಮ್ಮದ್ ಹನೀಫ್ ಆಯ್ಕೆ

ದೇರಳಕಟ್ಟೆ, : ಮೇಲ್ತೆನೆ (ಬ್ಯಾರಿ ಲೇಖಕರು ಮತ್ತು ಕಲಾವಿದರ ಕೂಟ)ಯ ವತಿಯಿಂದ ದೇರಳಕಟ್ಟೆಯ ‘ಕಣಚೂರು ಪಬ್ಲಿಕ್ ಸ್ಕೂಲ್’ ಕ್ಯಾಂಪಸ್‌ನಲ್ಲಿ ಅಕ್ಟೋಬರ್ 15ರಂದು ನಡೆಯುವ ಉಳ್ಳಾಲ ತಾಲೂಕು 2ನೆ ಬ್ಯಾರಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಲೇಖಕ, ಸಂಘಟಕ, ಅಡ್ವಕೇಟ್ ಬಿ.ಎ. ಮುಹಮ್ಮದ್ ಹನೀಫ್ ಆಯ್ಕೆಯಾಗಿದ್ದಾರೆ.

ಪರಿಚಯ: 1965ರ ಜುಲೈ 1ರಂದು ಬಿ.ಎಂ. ಅಬ್ದುಲ್ ರಹ್ಮಾನ್-ಖತೀಜಾ ದಂಪತಿಯ ಪುತ್ರನಾಗಿ ಜನಿಸಿದ ಬಿ.ಎ. ಮುಹಮ್ಮದ್ ಹನೀಫ್ ಬೆಳ್ತಂಗಡಿ ತಾಲೂಕಿನ ಪೆರಿಂಜೆಯಲ್ಲಿ ಪ್ರಾಥಮಿಕ ಮತ್ತು ಮಂಗಳೂರು ತಾಲೂಕಿನ ಕುಪ್ಪೆಪದವು ಸರಕಾರಿ ಪ್ರೌಢಶಾಲೆಯಲ್ಲಿ ಪ್ರೌಢ ಹಾಗೂ ಎಡಪದವು ಸ್ವಾಮಿ ವಿವೇಕಾನಂದ ಜೂನಿಯರ್ ಕಾಲೇಜಿನಲ್ಲಿ ಪಿಯುಸಿ, ಮಂಗಳೂರಿನ ಎಸ್‌ಡಿಎಂ ಕಾಲೇಜಿನಲ್ಲಿ ಕಾನೂನು ಪದವಿ ಪಡೆದರು.

1990ರಲ್ಲಿ ಮಂಗಳೂರು ಬಾರ್ ಅಸೋಸಿಯೇಶನ್‌ನ ಸದಸ್ಯತ್ವ ಪಡೆದು ನ್ಯಾಯವಾದಿಯಾಗಿ ವೃತ್ತಿ ಆರಂಭಿಸಿದರು. 2001ರಿಂದ ನೋಟರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬ್ಯಾರಿ ಆಂದೋಲನದಲ್ಲಿ ತೊಡಗಿಸಿಕೊಂಡಿದ್ದ ಬಿ.ಎ. ಮುಹಮ್ಮದ್ ಹನೀಫ್ 2014-17ರಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಈ ಅವಧಿಯಲ್ಲಿ 20 ಸಾವಿರ ಬ್ಯಾರಿ ಪದಗಳನ್ನು ಸಂಗ್ರಹಿಸಿ ಬ್ಯಾರಿ-ಕನ್ನಡ- ಇಂಗ್ಲಿಷ್ ಡಿಕ್ಷಿನರಿ ರಚನೆ, ಮಂಗಳೂರು ವಿವಿಯಲ್ಲಿ ಬ್ಯಾರಿ ಅಧ್ಯಯನ ಪೀಠ ಸ್ಥಾಪನೆಗೆ ಪ್ರಯತ್ನ, ಅಕ್ಟೋಬರ್ 3ರಂದು ಬ್ಯಾರಿ ಭಾಷಾ ದಿನಾಚರಣೆಗೆ ಪ್ರಯತ್ನಪಟ್ಟವರಲ್ಲಿ ಪ್ರಮುಖರಾಗಿದ್ದರು. ಜಾತಿ, ಧರ್ಮ ಮತ್ತು ಮೀಸಲಾತಿ’, ‘ಬ್ಯಾರಿ ಆಂದೋಲನದ ಹೆಜ್ಜೆಗಳು’, ‘ನಮ್ಮೂರು’, ‘ಬ್ಯಾರಿ ಅಧ್ಯಯನ 2008’ ಕೃತಿಯನ್ನೂ ರಚಿಸಿದ್ದಾರೆ. ಅಹಿಂದ ಸಂಘಟನೆಯ ದ.ಕ.ಜಿಲ್ಲಾ ಉಪಾಧ್ಯಕ್ಷರಾಗಿ, ಕೇಂದ್ರ ಬ್ಯಾರಿ ಸಾಹಿತ್ಯ ಪರಿಷತ್, ಅಖಿಲ ಭಾರತ ಬ್ಯಾರಿ ಪರಿಷತ್, ಮುಸ್ಲಿಂ ವಿಕಾಸ ಪರಿಷತ್‌ನ ಅಧ್ಯಕ್ಷರಾಗಿಯೂ ಸೇವ ಸಲ್ಲಿಸಿದ್ದರು. ಮಂಗಳೂರು ನ್ಯಾಯವಾದಿಗಳ ಸೌಹಾರ್ದ ಸಹಕಾರಿ (ನಿ) ಇದರ ನಿರ್ದೇಶಕರಾಗಿದ್ದಾರೆ ಎಂದು ‘ಮೇಲ್ತೆನೆ’ಯ ಪ್ರಕಟನೆ ತಿಳಿಸಿದೆ.

Related Posts

Leave a Reply

Your email address will not be published.