ಅವ್ಯವಸ್ಥೆಯ ಆಗರವಾದ ಮಡ್ಯಾರು ವಿದ್ಯಾರ್ಥಿನಿ ನಿಲಯ : ಕತ್ತಲಲ್ಲಿ ವಿದ್ಯಾರ್ಥಿನಿಯರ ಪರದಾಟ
ಉಳ್ಳಾಲ: ಕಗ್ಗತ್ತಲು ಆವರಿಸಿದ 500 ಮೀ ಉದ್ದದ ನಿರ್ಜನ ಪ್ರದೇಶದ ದಾರಿಯಲ್ಲಿ ಮೊಬೈಲ್ ಟಾರ್ಚ್ ಹಿಡಿದುಕೊಂಡೇ ವಿದ್ಯಾರ್ಥಿನಿಯರ ಪ್ರಯಾಣ, ಕೆಂಪು ತೈಲ ಮಿಶ್ರಿತ ಹಾಸ್ಟೆಲ್ ಬಾವಿ ನೀರು, ವಠಾರವಿಡೀ ತುಂಬಿದ ಶೌಚಾಲಯದ ಹೊಂಡದ ನೀರು, ಬಸ್ ವ್ಯವಸ್ಥೆಯಿಲ್ಲದೆ ವಿದ್ಯಾರ್ಥಿನಿಯರ ನರಕಯಾತನೆ . ಇದು ಕೋಟೆಕಾರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ 11ನೇ ವಾರ್ಡಿನ ಮಡ್ಯಾರ್ ಭಾಗದಲ್ಲಿ ಒಂದು ವರ್ಷದ ಹಿಂದೆ ನಿರ್ಮಾಣವಾದ ಶ್ರೀ ದೇವರಾಜ ಅರಸು ಹಿಂದುಳಿದ ವರ್ಗಗಳ (ಶ್ರೀಮತಿ ಇಂದಿರಾಗಾಂಧಿ) ಮಹಿಳಾ ನರ್ಸಿಂಗ್ ವಿದ್ಯಾರ್ಥಿನಿ ನಿಲಯದ 250 ವಿದ್ಯಾರ್ಥಿನಿಯರ ಕಥೆ ವ್ಯಥೆ.
ಮಡ್ಯಾರ್ ಪೌರ್ಣಮಿ ಗ್ಲಾಸ್ ಹೌಸ್ ಬಳಿ ಮುಖ್ಯ ರಸ್ತೆಯಲ್ಲಿ ಬಸ್ಸಿನಿಂದ ಇಳಿಯುವ ವಿದ್ಯಾರ್ಥಿನಿಯರು 500 ಮೀ. ದೂರದಲ್ಲಿರುವ ವಿದ್ಯಾರ್ಥಿನಿ ನಿಲಯಕ್ಕೆ ನಡೆದುಕೊಂಡೇ ಹೋಗಬೇಕಿದೆ. ಸಂಜೆ 6.30 ನಂತರ ಬರುವ ವಿದ್ಯಾರ್ಥಿನಿಯರು ನಿರ್ಜನವಾಗಿರುವ ರಸ್ತೆಯುದ್ದಕ್ಕೂ ಮೊಬೈಲ್ ಟಾರ್ಚ್ ಹಿಡಿದುಕೊಂಡು , ಆತಂಕದೊಂದಿಗೆ ನಿಲಯ ತಲುಪಬೇಕಿದೆ. ಮಡ್ಯಾರ್ ನಿರ್ಜನ ಪ್ರದೇಶದಲ್ಲಿ 2022ರ ಜ.24 ರಂದು ದೇವರಾಜ್ ಅರಸು ವಿದ್ಯಾರ್ಥಿನಿ ನಿಲಯವನ್ನು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದ್ದರು. ಸಚಿವ ಅಂಗಾರ, ಶಾಸಕ ಯು.ಟಿ ಖಾದರ್ ನೇತೃತ್ವದಲ್ಲಿ ಕಟ್ಟಡದ ಉದ್ಘಾಟನೆಯಾಗಿದೆ. ಎರಡು ವಿದ್ಯಾರ್ಥಿನಿ ನಿಲಯಗಳಲ್ಲಿ 250ಕ್ಕೂ ರಷ್ಟು ವಿದ್ಯಾರ್ಥಿನಿಯರಿದ್ದಾರೆ. ಹಲವರು ಮಂಗಳೂರಿನ ವಿವಿಧ ಕಾಲೇಜಿಗೆ ತೆರಳುವವರಾಗಿದ್ದರೆ, ಇನ್ನು ಹಲವರು ಕೊಣಾಜೆ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಶಿಕ್ಷಣ ನಡೆಸುತ್ತಿರುವವರು.
ಮಂಗಳೂರು ಭಾಗದಿಂದ 19 ಕಿ.ಮೀ ಮತ್ತು ಕೊಣಾಜೆಯಿಂದ 8 ಕಿ.ಮೀ ವರೆಗೆ ವಿದ್ಯಾರ್ಥಿಗಳು ನಿಲಯ ತಲುಪಲು ಪ್ರಯಾಣಿಸಬೇಕಾದ ಅನಿವಾರ್ಯತೆ ಇದೆ. ಆದರೆ ಮಡ್ಯಾರ್ ಪ್ರದೇಶಕ್ಕೆ ಬೆರಳೆಣಿಕೆ ಬಸ್ಸುಗಳು ಮಾತ್ರ ಇರುವುದರಿಂದ ಸಮಯಕ್ಕೆ ಸರಿಯಾಗಿ ವಿದ್ಯಾರ್ಥಿನಿಯರು ಕಾಲೇಜಾಗಲಿ, ವಿದ್ಯಾರ್ಥಿ ನಿಲಯವನ್ನಾಗಲಿ ತಲುಪಲು ಸಾಧ್ಯವಾಗುತ್ತಿಲ್ಲ. ಮುಖ್ಯ ರಸ್ತೆಯಿಂದ ವಿದ್ಯಾರ್ಥಿನಿ ನಿಲಯದವರೆಗೆ 18 ವಿದ್ಯುತ್ ಕಂಬಗಳಿದ್ದು ಒಂದರಲ್ಲಿಯೂ ದಾರಿದೀಪವಿಲ್ಲ. ನಿಲಯದ ಒಳಗಿನ ಬಾವಿಯ ನೀರು ಸಂಪೂರ್ಣ ತೈಲಮಿಶ್ರಿತವಾಗಿದೆ. ಕೆಂಪು ಬಣ್ಣಕ್ಕೆ ತಿರುಗಿರುವ ನೀರನ್ನು ಸ್ಥಳೀಯ ಕೌನ್ಸಿಲರ್ ಹರೀಶ್ ರಾವ್ ಮಡ್ಯಾರ್ ನೇತೃತ್ವದಲ್ಲಿ ಲ್ಯಾಬರೇಟರಿಗೆ ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ನೀರಿನಲ್ಲಿ ಅಧಿಕ ಖನಿಜ ಇರುವುದರಿಂದ ಕುಡಿಯಲು ಅಯೋಗ್ಯ ಅನ್ನುವ ವರದಿಯನ್ನು ಲ್ಯಾಬ್ ನೀಡಿದೆ. ಆದರೂ ವಿದ್ಯಾರ್ಥಿನಿಯರು ಅದೇ ನೀರು ಕುಡಿದುಕೊಂಡು ದಿನ ಕಳೆಯಬೇಕಿದೆ. ಇನ್ನೊಂದೆಡೆ ಕಟ್ಟಡಕ್ಕೆ ತ್ಯಾಜ್ಯ ನೀರು ಸಂಸ್ಕರಣಾ ಘಟಕವನ್ನು ನಿರ್ಮಿಸಲಾಗಿದ್ದರೂ, ಅದರ ನಿರ್ವಹಣೆ ಸರಿಯಾಗಿ ನಡೆಯದೇ ಕೊಳಚೆ ನೀರು ತುಂಬಿ ತುಳುಕಿ ಸ್ಥಳೀಯರ ತೋಟಕ್ಕೆ , ಮನೆ ಅವರಣಕ್ಕೆ ನುಗ್ಗಿ ತೊಂದರೆಯುಂಟಾಗಿದೆ. ಈ ಬಗ್ಗೆ ಸಾರ್ವಜನಿಕರು ಸ್ಥಳೀಯ ಕೌನ್ಸಿಲರನ್ನು ತರಾಟೆಗೆ ತೆಗೆದುಕೊಂಡು ಸಮಸ್ಯೆ ನಿರ್ವಹಣೆಗೆ ಆಗ್ರಹಿಸಿದ್ದಾರೆ. ಇದರೊಂದಿಗೆ ಶೌಚಾಲಯದ ಪಿಟ್ ಗಳು ತುಂಬಿ ಹಾಸ್ಟೆಲ್ ಆವರಣವಿಡೀ ಕೊಳಚೆ ನೀರು ಹರಿದು ಅವ್ಯವಸ್ಥೆಯ ಆಗರವಾಗಿಬಿಟ್ಟಿದೆ. ಪ್ರದೇಶದಲ್ಲಿ ವಿದ್ಯಾರ್ಥಿನಿಯರ ರಕ್ಷಣೆಯ ಪ್ರಶ್ನೆ ಒಂದೆಡೆಯಾದರೆ ಇನ್ನೊಂದೆಡೆ ಆರೋಗ್ಯದ ಕಾಳಜಿಯನ್ನು ಸಂಬಂಧಪಟ್ಟ ಇಲಾಖೆ ಮರೆತಂತೆ ಕಾಣುತ್ತಿದೆ. ಈ ಕುರಿತು ವಿದ್ಯಾರ್ಥಿನಿಯರು ಸ್ಥಳೀಯ ಕೌನ್ಸಿಲರ್ ಮೂಲಕ ಸಮಸ್ಯೆ ಪರಿಹಾರಕ್ಕೆ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.