ಹರೇಕಳ: ಒಂಟಿ ಮಹಿಳೆ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ

ಉಳ್ಳಾಲ: ಒಂಟಿ ಮಹಿಳೆ ಮೃತದೇಹ ಕೊಳೆತ ಸ್ಥಿತಿಯಲ್ಲಿ ತಾನು ವಾಸವಿದ್ದ ಮನೆಯ ಅಡುಗೆಕೋಣೆಯಲ್ಲಿ ಪತ್ತೆಯಾಗಿರುವ ಘಟನೆ ಹರೇಕಳ ಸಮೀಪದ ದೇರಡ್ಕ ಎಂಬಲ್ಲಿ ನಡೆದಿದೆ.ಹರೇಕಳ ದೇರಡ್ಕ ನಿವಾಸಿ ಜೀನಿ ಡಿಸೋಜ ಎಂಬವರ ಪತ್ನಿ ಮಗ್ಗಿ ಮೊಂತೇರೊ (62) ಎಂಬವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಫೆ.16 ರಂದು ಪುತ್ರಿ ಮನೆಗೆ ಬಂದು ತಾಯಿ ಜತೆಗೆ ಮಾತನಾಡಿ ತೆರಳಿದ್ದರು. ಆನಂತರ ಮೂರು ದಿನಗಳಿಂದ ಮೊಬೈಲ್ ಕರೆ ಸ್ವೀಕರಿಸದ ಹಿನ್ನೆಲೆಯಲ್ಲಿ ಪುತ್ರಿ ಮನೆಗೆ ಬಂದಾಗ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅಡುಗೆ ನಡೆಸುವ ಒಲೆಯ ಸಮೀಪದಲ್ಲೇ ಮೃತದೇಹ ಬಿದ್ದ ಸ್ಥಿತಿಯಲ್ಲಿದೆ. ಅಸೌಖ್ಯದಿಂದ ಕಳಗೆ ಬಿದ್ದು ತಲೆಗೆ ಗಾಯವಾಗಿ ಸಾವನ್ನಪ್ಪಿರುವ ಶಂಕೆಯನ್ನು ಕೊಣಾಜೆ ಪೊಲೀಸರು ವ್ಯಕ್ತಪಡಿಸಿದ್ದಾರೆ. ಸ್ಥಳೀಯರೊಂದಿಗೆ ಮಾತನಾಡದೇ ಇರುತ್ತಿದ್ದ ಮಗ್ಗಿ ಮೊಂತೇರೊ ಅವರು 3 ಎಕರೆ ಸ್ಥಳದಲ್ಲಿದ್ದ ಒಂಟಿ ಮನೆಯಲ್ಲಿ ಒಂಟಿಯಾಗಿಯೇ ವಾಸಿಸುತ್ತಿದ್ದರು. ಓರ್ವ ಪುತ್ರ ಕೂಡಾ ತಾಯಿ ಜತೆಗಿರುತ್ತಿರಲಿಲ್ಲ. ಅಪರೂಪಕ್ಕೆ ಸ್ಥಳೀಯರ ಜೊತೆಗೆ ಮಾತನಾಡುವಾಗ ` ಗುಳಿಗ ದೈವದ ವಿಚಾರವನ್ನೇ ಮಗ್ಗಿ ಮೊಂತೇರೋ ಮಾತನಾಡುತ್ತಿದ್ದರು ಎಂದು ಪ್ರತಿಕ್ರಿಯಿಸಿದ್ದಾರೆ. ಸ್ಥಳಕ್ಕಾಗಮಿಸಿದ ಕೊಣಾಜೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.

Related Posts

Leave a Reply

Your email address will not be published.