ಕೋಟೆಕಾರಿನಿಂದ ಕಳವಾದ ಬೈಕ್ ಮಂಗಳೂರಿನಲ್ಲಿ ಪತ್ತೆ, ಮೂವರು ಪೊಲೀಸರ ವಶಕ್ಕೆ

ಉಳ್ಳಾಲ: ಕೋಟೆಕಾರು ಕೊರಗಜ್ಜನ ಕಟ್ಟೆ ಬಳಿಯಿಂದ ಕಳವು ನಡೆಸಿದ್ದ ಬೈಕ್ ಇಂದು ಮಂಗಳೂರಿನಲ್ಲಿ ಪತ್ತೆಯಾಗಿದ್ದು, ಬೈಕ್ ಮಾಲೀಕರ ಸ್ನೇಹಿತರೊಬ್ಬರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಬೈಕ್ ಸಮೇತ ಪಾಂಡೇಶ್ವರ ಠಾಣಾ ಪೊಲೀಸರು ಮೂವರನ್ನು ವಶಕ್ಕೆ ಪಡೆದುಕೊಂಡಿರುವುದಾಗಿ ತಿಳಿದುಬಂದಿದೆ.


ಮಾ.28ರ ನಸುಕಿನ ಜಾವ ಕೋಟೆಕಾರು ಕೊರಗಜ್ಜನ ಕಟ್ಟೆ ಬಳಿ ಒಳರಸ್ತೆಯಲ್ಲಿ ನಿಲ್ಲಿಸಿದ್ದ ರಾಜೇಶ್ ಎಂಬವರಿಗೆ ಸೇರಿದ ಬೈಕನ್ನು ಕಳ್ಳರು ಕಳವು ನಡೆಸಿದ್ದರು. ಕೃತ್ಯ ಸಿಸಿಟಿವಿಯಲ್ಲಿ ಸೆಎರಯಾಗಿದ್ದು, ಕಳ್ಳನ ಚಹರೆಯೂ ಸರಿಯಾಗಿ ಗೋಚರಿಸಿತ್ತು. ಅದೇ ದಿನದಂದು ತೊಕ್ಕೊಟ್ಟು ಕಾಂಗ್ರೆಸ್ ಕಚೇರಿ ಮುಂಭಾಗದ ಕೊರಗಜ್ಜನ ಕಟ್ಟೆ ಬಳಿ ನಿಲ್ಲಿಸಿದ್ದ ಬೈಕ್ ಕೂಡಾ ಕಳವು ನಡೆದಿತ್ತು. ಅದರ ದೃಶ್ಯ ಕೂಡಾ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ಕುರಿತು ಎರಡು ಪ್ರತ್ಯೇಕ ಬೈಕ್ ಕಳವು ಪ್ರಕರಣ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು.
ಸಿಕ್ಕಿದ್ದು ಹೇಗೆ?

ಕಳವಾದ ರಾಜೇಶ್ ಸ್ನೇಹಿತ ರಫೀಕ್ ಕೆಲಸದ ನಿಮಿತ್ತ ಇಂದು ನಗರದ ಹಂಪನಕಟ್ಟೆಯ ಮಿನಿವಿಧಾನಸೌಧಕ್ಕೆ ತೆರಳಿದ್ದರು. ಅಲ್ಲಿ ರೈಲು ನಿಲ್ದಾಣದ ರಸ್ತೆ ಬದಿಯ ಅಂಗಡಿಗೆ ತೆರಳಿದ್ದ ಸಂದರ್ಭ ಅಂಗಡಿ ಎದುರುಗಡೆ ಬೈಕ್ ನಿಂತಿತ್ತು. ಕಳವಾದ ಸ್ನೇಹಿತ ರಾಜೇಶನ ಬೈಕ್ ಎಂದು ಶಂಕೆ ವ್ಯಕ್ತಪಡಿಸಿ , ಅಲ್ಲಿದ್ದ ಯುವಕರನ್ನು ಪ್ರಶ್ನಿಸುತ್ತಿದ್ದಂತೆ, ಇಬ್ಬರು ಪರಾರಿಯಾಗಿದ್ದಾರೆ. ಬೈಕ್ ನೋಂದಣಿ ಸಂಖ್ಯೆಯನ್ನು ಬದಲಾಯಿಸಿದ್ದ ಕಿರಾತಕರು , ಅದರಲ್ಲಿ ` ಸೋನು’ ಎಂದು ಅಂಟಿಸಲಾಗಿದ್ದ ಸ್ಟಿಕರ್ ತೆಗೆಯುವಲ್ಲಿ ವಿಫಲರಾಗಿದ್ದರು. ತಕ್ಷಣ ರಫೀಕ್ ಸ್ಥಳದಲ್ಲಿದ್ದ ಪಾಂಡೇಶ್ವರ ಪೊಲೀಸ್ ಠಾಣೆಯ ಮಹಿಳಾ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಅಂಗಡಿ ಸಿಸಿಟಿವಿಯ ಮಾಹಿತಿ ಪಡೆದು ಕಸಬ ಬೆಂಗ್ರೆ ಮತ್ತು ಪಡುಬಿದ್ರೆ ಮೂಲದ ಮೂವರನ್ನು ಬಂಧಿಸಿರುವುದಾಗಿ ತಿಳಿದುಬಂದಿದೆ.

ಬೈಕ್ ಕಳವಾದ ಕುರಿತು ಕೊರಗಜ್ಜನ ಕಟ್ಟೆ ಎದುರುಗಡೆ ರಾಜೇಶ್ ಸೇರಿದಂತೆ ಹಲವರು ಕಳ್ಳನ ಪತ್ತೆಯಾಗುವಂತೆ ಸಾಮೂಹಿಕ ಪ್ರಾರ್ಥನೆ ನಡೆಸಿದ್ದರು. ಎರಡು ದಿನಗಳ ಒಳಗೆ ಬೈಕ್ ಪತ್ತೆಯಾಗುವುದರ ಜೊತೆಗೆ ಕಳ್ಳರನ್ನು ಸೆರೆಹಿಡಿಯಲಾಗಿದೆ. ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಹಲವು ಬೈಕ್ ಗಳ ಕಳವು ಜಾಲದಲ್ಲಿ , ಪೊಲೀಸ್ ವಶದಲ್ಲಿರುವವರ ಕೈವಾಡವಿರುವ ಕುರಿತು ತನಿಖೆಯಾಗಬೇಕಿದೆ ಎಂದು ಬೈಕ್ ಕಳೆದುಕೊಂಡ ಮಾಲೀಕರು ಒತ್ತಾಯಿಸಿದ್ದಾರೆ.

Related Posts

Leave a Reply

Your email address will not be published.