ಮಾಡೂರು ತಲವಾರು – ದೊಣ್ಣೆ ತೋರಿಸಿ ಜಾನುವಾರು ಕಳವು ನಡೆಸಿದ ಮೂವರ ಬಂಧನ

ಉಳ್ಳಾಲ:ಮಾಡೂರು ಸೈಟ್ ನಲ್ಲಿ ತಲವಾರು ದೊಣ್ಣೆ ತೋರಿಸಿ ಜೀವಬೆದರಿಕೆಯೊಡ್ಡಿ ಜಾನುವಾರು ಕಳವುಗೈದ ಮೂವರು ಆರೋಪಿಗಳನ್ನು ಎಸಿಪಿ ದಿನಕರ್ ಶೆಟ್ಟಿ ಮಾರ್ಗದರ್ಶನದಲ್ಲಿ ಠಾಣಾಧಿಕಾರಿ ಸಂದೀಪ್ ಜಿ.ಎಸ್ ನೇತೃತ್ವದ ಪೊಲೀಸ್ ತಂಡ ಬಂಧಿಸಿದೆ. ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದಾನೆ.

ಬಂಟ್ವಾಳ ಕಸಬಾ ಗ್ರಾಮದ ಟಿಪ್ಪುನಗರ ದ ಜಾಬೀರ್ (24), ಫರಂಗಿಪೇಟೆ ಅಮ್ಮೆಮ್ಮಾರ್ ಮಸೀದಿ ಬಳಿಯ ಹೈದರಾಲಿ(24), ಬಂಟ್ವಾಳ ಸಿದ್ದಕಟ್ಟೆಯ ಸಂಗಬೆಟ್ಟುವಿನ ಮುಹಮ್ಮದ್ ಆರೀಫ್(30) ಬಂಧಿತರು.

ಮಾಡೂರು ಸೈಟ್ ನಿವಾಸಿ ಸತೀಶ್ ಎಂಬವರಿಗೆ ಸೇರಿದ ರೂ. 30,000 ಬೆಲೆಬಾಳುವ 4 ವರ್ಷ ಪ್ರಾಯದ ಹೋರಿ ಎತ್ತನ್ನು ಆರೋಪಿಗಳು ಕಳವು ನಡೆಸಿದ್ದರು.ಆ.22. ರಂದು ಮಾಡೂರು ವನದುರ್ಗ ಅಯ್ಯಪ್ಪ ಮಂದಿರದ ಅಶ್ವತ್ಥಕಟ್ಟೆಯ ಬಳಿ ಕಟ್ಟಿ ಹಾಕಲಾಗಿದ್ದ ಹೋರಿಯನ್ನು ನಸುಕಿನ 4.25 ಕ್ಕೆ ಇಬ್ಬರು ಆರೋಪಿಗಳು ಬಲಾತ್ಕಾರವಾಗಿ ಹಿಂಸಾತ್ಮಕವಾಗಿ ಎಳೆದೊಯ್ಯುವಾಗ ಜೋರಾಗಿ ಕೂಗುವುದನ್ನು ಗಮನಿಸಿ ಮಾಲೀಕ ಸತೀಶ್ ಅವರು ಓಡಿಬಂದಿದ್ದರು. ಈ ವೇಳೆ ತಲವಾರು ಮತ್ತು ದೊಣ್ಣೆ ತೋರಿಸಿದ ದುಷ್ಕರ್ಮಿಗಳು , ಅಡ್ಡಿಪಡಿಸಿದರೆ ಕೊಲ್ಲುವುದಾಗಿ ಜೀವಬೆದರಿಕೆಯೊಡ್ಡಿ ಜಾನುವಾರನ್ನು ಕಾರಿನೊಳಗಡೆ ತುಂಬಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ‌. ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರಿನ ತನಿಖೆ ನಡೆಸಿದ ಎಸಿಪಿ ನೇತೃತ್ವದ ಉಳ್ಳಾಲ ಪೊಲೀಸ್ ತಂಡ ಮೂವರನ್ನು ಬಂಧಿಸಿದೆ. ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿಯ ಬಂಧನ ಇನ್ನಷ್ಟೇ ಆಗಬೇಕಿದ್ದು, ಆತ ಪರಾರಿಯಾಗಿದ್ದಾನೆ.

Related Posts

Leave a Reply

Your email address will not be published.