ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ, ಚಾಲಕನಿಗೆ ಗಾಯ

ಉಳ್ಳಾಲ: ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ವಿಭಜಕದಲ್ಲಿರುವ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಪಲ್ಟಿ ಹೊಡೆದಿರುವ ಘಟನೆ ರಾ.ಹೆ66 ರ ಕೋಟೆಕಾರು ಬೀರಿ ಸಮೀಪ ನಿನ್ನೆ ತಡರಾತ್ರಿ ವೇಳೆ ನಡೆದಿದೆ. ಸ್ಥಳೀಯ ಯುವಕರ ತಂಡ ತಕ್ಷಣ ಕಾರು ಚಾಲಕನನ್ನು ಹೊರಗೆಳೆದು ರಕ್ಷಿಸಿ ಮಾನವೀಯತೆ ಮೆರೆದಿರುವ ವೀಡಿಯೋ ವೈರಲ್ ಆಗಿದೆ.

ಹಳೆಯಂಗಡಿ ನಿವಾಸಿ ನೌಫಾಲ್ ಗಾಯಗೊಂಡವರು. ತಲಪಾಡಿ ಕಡೆಯಿಂದ ಹಳೆಯಂಗಡಿಯತ್ತ ತೆರಳುವ ವೇಳೆ ಕಾರು ನಿಯಂತ್ರಣ ಕಳೆದು ರಾ.ಹೆ. ಬಳಿಯ ವಿಭಜಕ ಏರಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಕಾರು ಪಲ್ಟಿ ಹೊಡೆದು, ಚಾಲಕ ಅದರೊಳಕ್ಕೆ ಸಿಲುಕಿದ್ದರು. ತಕ್ಷಣ ಸ್ಥಳೀಯ ಯುವಕರ ತಂಡ ಸ್ಥಳಕ್ಕೆ ದೌಡಾಯಿಸಿ ಕಾರೊಳಗಡೆ ಸಿಲುಕಿದ್ದ ನೌಫಾಲ್ ನನ್ನು ಹೊರಗೆಳೆದು ಬೇರೆ ಕಾರಿನ ಮೂಲಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಕುರಿತು ವೀಡಿಯೋ ವೈರಲ್ ಆಗಿದ್ದು, ಯುವಕರ ಸಾಮಾಜಿಕ ಕಳಕಳಿಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

Related Posts

Leave a Reply

Your email address will not be published.