ಪುರುಷರ ಅಖಿಲ ಭಾರತ ಅಂತರ ವಿವಿ ಬಾಲ್ ಬ್ಯಾಡ್ಮಿಂಟನ್ : ಆಚಾರ್ಯ ನಾಗಾರ್ಜುನ ವಿವಿ, ಕೇರಳ ಪ್ರೀ ಕ್ವಾರ್ಟರ್ ಫೈನಲ್‍ಗೆ

ಮಂಗಳೂರು ವಿಶ್ವವಿದ್ಯಾನಿಲಯ ಆಶ್ರಯದಲ್ಲಿ ಉಪ್ಪಿನಂಗಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯುತ್ತಿರುವ ಪುರುಷರ ಅಖಿಲ ಭಾರತ ಅಂತರ ವಿವಿ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್‍ನಲ್ಲಿ ಕೇರಳ ವಿವಿ, ತಮಿಳುನಾಡು ಚಿದಂಬರಂನ ಅಣ್ಣಾಮಲೈ ವಿವಿ ಮತ್ತು ಆಂಧ್ರಪ್ರದೇಶದ ಆಚಾರ್ಯ ನಾಗಾರ್ಜುನ ವಿವಿ ತಂಡಗಳು ಫ್ರಿ ಕ್ವಾರ್ಟರ್ ಫೈನಲ್‍ಗೆ ಪ್ರವೇಶಿಸಿವೆ. ಚೆನ್ನೈನ ಅಣ್ಣಾ ವಿವಿ, ತಮಿಳುನಾಡು ತಿರುಚಿನಾಪಳ್ಳಿಯ ಭಾರತಿದಾಸನ್ ವಿವಿ, ಮದ್ರಾಸ್ ವಿವಿ, ಸೇಲಂನ ಪೆರಿಯಾರ್ ವಿವಿ ಮತ್ತು ಕೊಯಮತ್ತೂರಿನ ಭಾರತಿಯಾರ್ ವಿವಿಗಳು ಕೂಡ 16 ರ ಘಟಕ್ಕೆ ಲಗ್ಗೆ ಇರಿಸಿವೆ. ಎರಡನೇ ದಿನವಾದ ಭಾನುವಾರದಂದು ಕಣದಲ್ಲಿದ್ದ ಕರ್ನಾಟಕದ 8 ವಿಶ್ವವಿದ್ಯಾನಿಲಯಗಳು ಕೂಡ ನಿರಾಸೆ ಕಂಡವು. ಕಳೆದ ಬಾರಿ ಮೂರನೇ ಸ್ಥಾನ ಗಳಿಸುವ ಮೂಲಕ ನೇರವಾಗಿ ಕ್ವಾರ್ಟರ್ ಫೈನಲ್ ಪ್ರವೇಶಿಸಿರುವ ಆತಿಥೇಯ ಮಂಗಳೂರು ವಿವಿ ಮೇಲೆ ಈಗ ನಿರೀಕ್ಷೆಯ ಭಾರ ಇದೆ. ಇಂದು ಆಚಾರ್ಯ ನಾಗಾರ್ಜುನ ಮತ್ತು ಅಣ್ಣಾಮಲೈ ವಿವಿ ನಡುವಿನ ಪಂದ್ಯದಲ್ಲಿ ಗೆದ್ದ ತಂಡವನ್ನು ಮಂಗಳೂರು ವಿವಿ ಎದುರಿಸಲಿದೆ.
