ಉಪ್ಪುಂದಲ್ಲಿ ಪ್ರಾಥಮಿಕ ಶಾಲೆ ಕಟ್ಟಡ ಕುಸಿತ
ಕುಂದಾಪುರ: ಬೈಂದೂರು ತಾಲೂಕಿನ ಉಪ್ಪುಂದ ಗ್ರಾ.ಪಂ ವ್ಯಾಪ್ತಿಯ ಅಮ್ಮನವರ ತೊಪ್ಲು ಎಂಬಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕಟ್ಟಡ ಕುಸಿದ ಘಟನೆ ವರದಿಯಾಗಿದೆ.
ಭಾರೀ ಮಳೆಯ ಹಿನ್ನೆಲೆ ಅಂದಾಜು 15 ವರ್ಷ ಹಿಂದಿನ ಮೂರು ಕೊಠಡಿಗಳುಳ್ಳ ಈ ಕಟ್ಟಡದ ಮೇಲ್ಮಾಡು ಸಹಿತ ಗೋಡೆಗಳು ಕುಸಿದಿದೆ. ಶಾಲೆಗೆ ರಜೆಯಿದ್ದ ಕಾರಣ ಹಾಗೂ ಸಂಜೆಮೇಲೆ ಶಾಲಾ ಕಟ್ಟಡ ಕುಸಿದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ.
ಶಿಥಿಲಗೊಂಡಿದ್ದ ಕಟ್ಟಡ..
ಅಮ್ಮನವರ ತೊಪ್ಲು ಭಾಗದ 60 ಕ್ಕೂ ಅಧಿಕ ವಿದ್ಯಾರ್ಥಿಗಳು ಇಲ್ಲಿ ವಿದ್ಯಾರ್ಜನೆಗೆ ಬರುತ್ತಾರೆ. ಮೂರು ಕೊಠಡಿಯಲ್ಲಿ 1 ರಿಂದ 5 ನೇ ತರಗತಿಗಳು ನಡೆಯುತ್ತಿತ್ತು. ಆದರೆ ಕೆಲ ವರ್ಷಗಳಿಂದ ಮಳೆಗಾಲದ ಮೂರು ತಿಂಗಳು ಸಮೀಪದ ಶಾಲೆ ಕಟ್ಟಡದಲ್ಲಿ ಪಾಠ ನಡೆಯುತ್ತಿತ್ತು. ನೂತನ ಶಾಲಾಕಟ್ಟಡ ನಿರ್ಮಾಣಕ್ಕೆ ಸ್ಥಳೀಯರು ಬೇಡಿಕೆಯಿಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಶಿಕ್ಷಣಾಧಿಕಾರಿ ನಾಗೇಶ್ ನಾಯ್ಕ್, ಉಪ್ಪುಂದ ಗ್ರಾ.ಪಂ ಅಧ್ಯಕ್ಷೆ ಲಕ್ಷ್ಮೀ, ಸದಸ್ಯ ಶ್ರೀಧರ್, ಪಿಡಿಒ ಮೊಹಮ್ಮದ್ ರಜೀಮ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನಾಗರಾಜ್ ಮೊದಲಾದವರು ಭೇಟಿ ನೀಡಿದ್ದಾರೆ.