ಉತ್ತರಕಾಶಿ : ಹಿಮಪಾತಕ್ಕೆ ಸಿಲುಕಿ 19 ಮಂದಿ ಪರ್ವತಾರೋಹಿಗಳು ಮೃತ
ಉತ್ತರಕಾಶಿಯಲ್ಲಿ ನಡೆದ ಹಿಮಪಾತಕ್ಕೆ ಸಿಲುಕಿ 19 ಮಂದಿ ಪರ್ವತಾರೋಹಿಗಳು ಮೃತಪಟ್ಟಿದ್ದಾರೆ. ಹಿಮಪಾತ ಅಪಘಾತದ ಮೂರನೇ ದಿನ ಎಲ್ಲಾ ರಕ್ಷಣಾ ತಂಡಗಳು ಸ್ಥಳಕ್ಕೆ ತಲುಪುವಲ್ಲಿ ಯಶಸ್ವಿಯಾಗಿದ್ದಾರೆ.ಈಗಾಗಲೇ ರಕ್ಷಣಾ ತಂಡವು 19 ಪರ್ವತಾರೋಹಿಗಳ ಮೃತದೇಹಗಳನ್ನು ಹೊರತೆಗೆದಿದ್ದು ಇನ್ನುಳಿದವರ ಶೋಧ ಕಾರ್ಯ ಹೆಲಿಕಾಪ್ಟರ್ ಮೂಲಕ ಮುಂದುವರಿದಿದೆ. ಹಿಮಪಾತದ ತೀವ್ರತೆಯಿಂದ ಗುರುವಾರ ಮಧ್ಯಾಹ್ನದ ನಂತರ ರಕ್ಷಣಾವನ್ನು ನಿಲ್ಲಿಸಲಾಗಿತ್ತು. ಮತ್ತೆ ಶೋಧ ಕಾರ್ಯ ಮುಂದುವರಿದಿದೆ.
ನೆಹರು ಇನ್‌ಸ್ಟಿಟ್ಯೂಟ್ ಆಫ್ ಮೌಂಟೇನಿಯರಿಂಗ್ (ಎನ್‌ಐಎಂ) ಪರ್ವತಾರೋಹಿಗಳ ತಂಡವು ಉತ್ತರಕಾಶಿಯಲ್ಲಿ ಹಿಮಪಾತದಲ್ಲಿ ಸಿಕ್ಕಿಬಿದ್ದ ಎರಡು ದಿನಗಳ ನಂತರ ಮೃತದೇಹಗಳು ಪತ್ತೆಯಾಗಿವೆ. 30 ಜನರ ರಕ್ಷಣಾ ತಂಡ ನಿರಂತರ ಶೊಧ ಕಾರ್ಯ ನಡೆಸುತ್ತಿದೆ.ಮಂಗಳವಾರ ಈ ತಂಡವು ಪರ್ವತಾರೋಹಣ ಮುಗಿಸಿ ಹಿಂತಿರುಗುತ್ತಿದ್ದಾಗ ಹಿಮಪಾತವು 17,000 ಅಡಿ ಎತ್ತರದ ದ್ರೌಪದಿ ಕಾ ದಂಡ ಶಿಖರವನ್ನು ಅಪ್ಪಳಿಸಿತು. ಹೀಗಾಗಿ ಹಿಮಪಾತದಲ್ಲಿ ಈ ತಂಡ ಸಿಲುಕಿತು. ಈ ತಂಡದಲ್ಲಿ ಒಟ್ಟು 70 ಕ್ಕೂ ಹೆಚ್ಚು ಜನರಿದ್ದರು. ಈ ತಂಡದಲ್ಲಿ 34 ಪ್ರಶಿಕ್ಷಣಾರ್ಥಿಗಳು ಸೇರಿದಂತೆ 42 ಆರೋಹಿಗಳಿದ್ದರು.
ರಕ್ಷಣಾ ಕಾರ್ಯದಲ್ಲಿ ಐಟಿಬಿಪಿ, ನೆಹರು ಇನ್‌ಸ್ಟಿಟ್ಯೂಟ್ ಆಫ್ ಮೌಂಟೇನಿಯರಿಂಗ್, ಏರ್ ಫೋರ್ಸ್, ಆರ್ಮಿ, ಎಸ್‌ಡಿಆರ್‌ಎಫ್, ಇತ್ಯಾದಿಗಳ ವಿವಿಧ ತಂಡಗಳಿಂದ ಒಟ್ಟು 30 ಜನರ ತಂಡ ಇದೆ. ಈಗಾಗಲೇ ಸುಮಾರು 14 ಪರ್ವತಾರೋಹಿಗಳನ್ನು ರಕ್ಷಿಸಲಾಗಿದೆ. ಹತ್ತಕ್ಕೂ ಹೆಚ್ಚು ಪರ್ವತಾರೋಹಿಗಳು ಇನ್ನೂ ಕಾಣೆಯಾಗಿದ್ದಾರೆ. ದುರಂತದ ಭೀಕರ ಅನುಭವವನ್ನು ವಿವರಿಸಿದ ಪರ್ವತಾರೋಹಣದಲ್ಲಿ ಬದುಕುಳಿದ ದೀಪ್ ಠಾಕೂರ್, ‘ದ್ರೌಪದಿ ಕಾ ದಂಡ’ ಶಿಖರವನ್ನು ಹತ್ತುವಾಗ ಇದ್ದಕ್ಕಿದ್ದಂತೆ ಹಿಮಪಾತ ಸಂಭವಿಸಿದೆ ಎಂದು ಹೇಳಿದರು.