ವಕ್ಫ್ ಸಲಹಾ ಸಮಿತಿ ಅಧ್ಯಕ್ಷರಿಂದ ಅನುದಾನ ಬಿಡುಗಡೆಗೆ ಹಣದ ಬೇಡಿಕೆ: ಗುಲಾಂ ಮುಹಮ್ಮದ್ ಆರೋಪ

ಉಡುಪಿ ಜಿಲ್ಲೆಯ ವಕ್ಫ್ ಸಲಹಾ ಸಮಿತಿಯು ಮಸೀದಿಗಳ ಅನುದಾನ ಬಿಡುಗಡೆಗೆ ಶೇ. 20 ರಷ್ಟು ಮುಂಗಡವಾಗಿ ನಗದು ರೂಪದಲ್ಲಿ ನೀಡಬೇಕು ಎಂದು ಬೇಡಿಕೆ ಇಡುತ್ತಿದ್ದಾರೆ ಎಂದು ಉಡುಪಿ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಮಾಜಿ ಉಪಾಧ್ಯಕ್ಷ ಗುಲಾಂ ಮುಹಮ್ಮದ್ ಹೆಜಮಾಡಿ ಆರೋಪಿಸಿದ್ದಾರೆ.
ಕಾಪು ಪ್ರೆಸ್‌ಕ್ಲಬ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ವಕ್ಫ್ ಸಲಹಾ ಸಮಿತಿಯು ಜಿಲ್ಲೆಯಲ್ಲಿರುವ ಮಸೀದಿಗಳ ಮೂಲಸೌಕರ್ಯಗಳ ಅಭಿವೃದ್ಧಿಗೆ ಚಿಂತನೆ ನಡೆಸುವ ಮೂಲಕ ಸರ್ಕಾರದ ಅನುದಾನವನ್ನು ದೊರಕಿಸಿಕೊಡುವಲ್ಲಿ ಪ್ರಯತ್ನ ನಡೆಸಬೇಕು. ಆದರೆ ಉಡುಪಿ ಜಿಲ್ಲೆಯ ಸಲಹಾ ಸಮಿತಿಯು ಇದಕ್ಕೆ ಅಪವಾದವಾಗಿದೆ. ಬೇಡಿಕೆ ಇಡುವ ಬಗ್ಗೆ ಈಗಾಗಲೇ ಜಿಲ್ಲೆಯ ಹಲವು ಮಸೀದಿಗಳು ದೂರುಗಳು ಬಂದಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಜಿಲ್ಲಾ ಸಮಿತಿಯನ್ನು ತಕ್ಷಣವೇ ವಜಾಗೊಳಿಸಿ ಆಡಳಿತಾಧಿಕಾರಿಯನ್ನು ನೇಮಕ ಮಾಡಬೇಕು ಆಗ್ರಹಿಸಿದ್ದಾರೆ.
ಜಿಲ್ಲೆಯಲ್ಲಿ ಹಲವು ಮಸೀದಿಗಳಲ್ಲಿ ಆಡಳಿತಾಧಿಕಾರಿಯಾಗಿ ವರ್ಷಗಳು ಕಳೆದಿದೆ. ಆಡಳಿತಾಧಿಕಾರಿಯಾಗಿ ನೂತನ ಸಮಿತಿಯನ್ನು ರಚನೆ ಮಾಡಬೇಕಾಗಿದ್ದು, ಈ ಬಗ್ಗೆ ವಕ್ಫ್ ಸಲಹಾ ಸಮಿತಿಯ ನೇಮಕ ಮಾಡುವಲ್ಲಿ ವಿಫಲವಾಗಿದೆ.
ವಕ್ಫ್ ಅಧಿಕಾರಿಗಳ ನಿರ್ಲಕ್ಷ, ಬೇಜವಾಬ್ದಾರಿತನದಿಂದ ವರ್ತಿಸುತಿದ್ದಾರೆ. ಈ ಬಗ್ಗೆಯೂ ರಾಜ್ಯ ವಕ್ಫ್ ಮಂಡಳಿ ಅಧಿಕಾರಿಗಳ ಸೇವೆಯ ಬಗ್ಗೆ ಮಾಹಿತಿ ಪಡೆದುಕೊಂಡು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಸರ್ಕಾರದಿಂದ ವಕ್ಫ್ ಸಲಹಾ ಸಮಿತಿಯ ಮೂಲಕ ಸಿಗುವ ಸವಲತ್ತಿನ ಬಗ್ಗೆ ಸರಿಯಾದ ಮಾಹಿತಿ ನೀಡದೆ ಇರುವುದರಿಂದ ಸರ್ಕಾರದ ಯೋಜನೆಗಳು ಸರಿಯಾಗಿ ಉಪಯೋಗವಾಗುತ್ತಿಲ್ಲ. ಇದರಿಂದ ವಕ್ಫ್ ಅನುದಾನ ಉಪಯೋಗವಾಗದೆ ಹಿಂದಕ್ಕೆ ಹೋಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.
ವಕ್ಫ್ ಸಲಹಾ ಸಮಿತಿಯ ರಚನೆ ಮಾಡುವ ವೇಳೆ ಮುಸ್ಲಿಮ್ ಮುಖಂಡರು ಅಥವಾ ಸಂಘಟನೆಯೊಂದಿಗೆ ಸಂಪರ್ಕಿಸಿ ಸಮಿತಿ ರಚನೆ ಮಾಡಬೇಕಾಗಿತ್ತು. ಆದರೆ ಯಾರನ್ನೂ ಸಂಪರ್ಕಿಸದೆ ವಕ್ಫ್ ಬಗ್ಗೆ ಮಾಹಿತಿ ಇಲ್ಲದವನರನ್ನು ಸಲಹಾ ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಯಾರದೋ ಒತ್ತಡಕ್ಕೆ ಮಣಿದು ಈ ಆಯ್ಕೆ ನಡೆದಿದೆ ಎಂದು ದೂರಿದರು.
ಹೆಜಮಾಡಿಯ ಕಣ್ಣಂಗಾರ್ ಜುಮ್ಮಾ ಮಸೀದಿ ಜಿಲ್ಲೆಯ ಅತೀ ದೊಡ್ಡ ಜಮಾಅತ್ ಆಗಿದೆ. ಇಲ್ಲಿ ಒಂದೂವರೆ ವರ್ಷಗಳಿಂದಲೂ ಆಡಳಿತಾಧಿಕಾರಿಯಾಗಿದ್ದು, ಇದುವರೆಗೂ ಸಮಿತಿ ರಚನೆ ಮಾಡದೆ ಇರುವುದರಿಂದ ವಕ್ಫ್ ಸಮಿತಿಯು ಮಸೀದಿಯ ಆಸ್ತಿಗಳ ನಾಶವಾಗುತ್ತಿವೆ. ಕೂಡಲೇ ಹೆಜಮಾಡಿ ಸಹಿತ ಹಲವು ಮಸೀದಿಗಳ ಸಮಿತಿ ರಚಿಸುವಲ್ಲಿ ಜಿಲ್ಲಾ ವಕ್ಫ್ ಸಲಹಾ ಸಮಿತಿ ಮುಂದಾಗಬೇಕು.
ರಾಜ್ಯ ವಕ್ಫ್ ಮಂಡಳಿಗೆ ಈ ಬಗ್ಗೆ ಹಲವು ಮಾಹಿತಿ ನೀಡಲಾಗಿದೆ. ಆದರೆ ರಾಜ್ಯ ವಕ್ಫ್ ಸಮಿತಿಯು ಈ ಬಗ್ಗೆ ಯಾವುದೇ ರೀತಿಯ ಕ್ರಮಕೈಗೊಳ್ಳುತ್ತಿಲ್ಲ. ಜಿಲ್ಲೆಯ ಸಲಹಾ ಸಮಿತಿಯ ಕಾರ್ಯವೈಖರಿಯು ತಿಳಿಯುವಲ್ಲಿ ರಾಜ್ಯ ವಕ್ಫ್ ಮಂಡಳಿ ವಿಫಲವಾಗಿದೆ. ಈ ಕೂಡಲೇ ಸರ್ಕಾರ ಮಧ್ಯೆ ಪ್ರವೇಶಿಸಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗದ ಕಾರ್ಯದರ್ಶಿ ಫರೂಕ್ ಚಂದ್ರನಗರ, ಕಾಪು ಕ್ಷೇತ್ರ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಶರ್ಫುದ್ದೀನ್ ಶೇಖ್, ಹಮೀದ್ ಮೂಳೂರು, ಶಂಸುದ್ದೀನ್ ಇಸ್ಮಾಯಿಲ್ ಉಪಸ್ಥಿತರಿದ್ದರು.

Related Posts

Leave a Reply

Your email address will not be published.