ಬಜರಂಗದಳವನ್ನು ನಿಷೇಧಿಸುವವರನ್ನು ಸಮಾಜ ನಿಷೇಧಿಸುತ್ತದೆ : ವಿಹಿಂಪ ಬಂಟ್ವಾಳ ಸಮಿತಿ ಅಧ್ಯಕ್ಷ ಪ್ರಸಾದ್ ಕುಮಾರ್ ರೈ ಹೇಳಿಕೆ
ಬಂಟ್ವಾಳ: ಕಾಂಗ್ರೆಸ್ ಪಕ್ಷ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಭಜರಂಗದಳವನ್ನು ನಿಷೇಧಿಸಲು ಹೊರಟಿರುವುದು ತೀವ್ರ ಖಂಡನೀಯ ಎಂದು ವಿಶ್ವ ಹಿಂದೂ ಪರಿಷತ್ ಬಂಟ್ವಾಳ ತಾಲೂಕು ಸಮಿತಿ ಅಧ್ಯಕ್ಷ, ನ್ಯಾಯವಾದಿ ಪ್ರಸಾದ್ ಕುಮಾರ್ ರೈ ಹೇಳಿದರು.
ಅವರು ಗುರುವಾರ ಬಿ.ಸಿ.ರೋಡಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಬಿಟಿಷರು ಹೇಗೆ ಈ ದೇಶದಲ್ಲಿ ಒಡೆದು ಆಳುವ ನೀತಿಯನ್ನು ಅನುಸರಿಸಿದರೋ ಅದೇ ರೀತಿ ಕಾಂಗ್ರೆಸ್ ಕೂಡ ಒಡೆದು ಆಳುವ ನೀತಿಯನ್ನು ಮುಂದುವರೆಸಿಕೊಂಡು ಹೋಗುತ್ತಿದೆ. ಈ ದೇಶದ ಅಸ್ಮಿತೆಯಯಾಗಿರುವ ಹಿಂಧೂ ಧರ್ಮವನ್ನು ಜಾತ್ಯಾತೀತತೆ, ತುಷ್ಠೀಕರಣ ಹೆಸರಿನಲ್ಲಿ ಮೆಟ್ಟುವ ಪ್ರಯತ್ನ ಮಾಡಿದೆ. ಬಹುಸಂಖ್ಯಾತರಾಗಿರುವ ಹಿಂದೂಗಳು ತಮ್ಮ ಧರ್ಮದ ಉಳಿವಿಗೆ ಹೋರಾಟ ಮಾಡುವ ಅನಿವಾರ್ಯ ಪರಿಸ್ಥಿತಿಯನ್ನು ಕಾಂಗ್ರೆಸ್ ತಂದೊಡ್ಡಿದೆ ಎಂದು ಆರೋಪಿಸಿದರು.
ಸೇವೆ, ಸುರಕ್ಷಾ, ಸಂಸ್ಕಾರದ ಮೂಲಕ ದೇಶ ರಕ್ಷಣ ಮಾಡುವ ಬಜರಂಗದಳವನ್ನು ನಿಷೇಧ ಮಾಡುವವರನ್ನು ಸಮಾಜ ನಿಷೇಧ ಮಾಡುತ್ತದೆ. ಹನುಮಂತನ ಬಾಲಕ್ಕೆ ಕಾಂಗ್ರಸ್ ಬೆಂಕಿ ಹಚ್ಚಿದೆ, ಈ ಮೂಲಕ ಕಾಂಗ್ರೆಸ್ ಸಾಮ್ರಾಜ್ಯ ನಾಶವಾಗಲಿದೆ ಎಂದ ಅವರು ಈ ಪ್ರಣಾಳಿಕೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಟಿಯಲ್ಲಿ ಪುತ್ತೂರು ಜಿಲ್ಲಾ ಸಹ ಸಂಚಾಲಕ ಗುರುರಾಜ್ ಬಂಟ್ವಾಳ, ಸಂಘಟನೆಯ ಪ್ರಮುಖರಾದ ಸುರೇಶ್ ಬೆಂಜನಪದವು, ಚಂದ್ರ ಕಲಾಯಿ, ಸಂತೋಷ್ ಸರಪಾಡಿ ಉಪಸ್ಥಿತರಿದರು.