ಡಾ. ನೂರ್ ಸಮದ್ ಅಬ್ಬಲಗೆರೆಯವರ ‘ವಿಸ್ಮಯ ಕೀಟ ಪ್ರಪಂಚ’ ಕೃತಿಗೆ ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ

ಕನ್ನಡದಲ್ಲಿ ಪ್ರಕಟಿತ ಮುಸ್ಲಿಮ್ ಬರಹಗಾರರ ಅತ್ಯುತ್ತಮ ಕೃತಿಗೆ ಕರ್ನಾಟಕ ಮುಸ್ಲಿಮ್ ಲೇಖಕರ ಸಂಘವು ಪ್ರತಿ ವರ್ಷ ಕೊಡಮಾಡುವ 2021ನೇ ಸಾಲಿನ ರಾಜ್ಯ ಮಟ್ಟದ ‘ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ’ಗೆ ಸಂಶೋಧಕ, ಕೃಷಿ ಅಧಿಕಾರಿ, ಕವಿ ಡಾ. ನೂರ್ ಸಮದ್ ಅಬ್ಬಲಗೆರೆಯವರ ‘ವಿಸ್ಮಯ ಕೀಟ ಪ್ರಪಂಚ’ ಕೃತಿ ಆಯ್ಕೆಯಾಗಿದೆ.

ಕೃಷಿ ಕೀಟಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಸಂಶೋಧನಾ ಕೇಂದ್ರಗಳಲ್ಲಿ ವಿಜ್ಞಾನಿಯಾಗಿ, ವಿದೇಶದ ಪ್ರತಿಷ್ಠಿತ ಬಹುರಾಷ್ಟ್ರೀಯ ಸಂಸ್ಥೆಯಲ್ಲಿ ಕೀಟಶಾಸ್ತ್ರಜ್ಞರಾಗಿ, ಪ್ರಸ್ತುತ ಬೆಂಗಳೂರಿನ ಕೃಷಿ ಇಲಾಖೆಯಲ್ಲಿ ಕೃಷಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಡಾ. ನೂರ್ ಸಮದ್ ಅಬ್ಬಲಗೆರೆಯವರು ಕಳೆದ ನಾಲ್ಕು ವರ್ಷಗಳಿಂದ ಸ್ವತಃ ಛಾಯಾಗ್ರಹಣ ಮಾಡಿ, ಕೀಟಗಳ ವಿಸ್ಮಯ ಲೇಖನಗಳನ್ನು ಪ್ರಜಾವಾಣಿ ದೈನಿಕದ ‘ಸಹಪಾಠಿ’ ಪುರವಣಿಯಲ್ಲಿ ಬರೆಯುತ್ತಿದ್ದು, ಅದರ ಅಪರೂಪದ ಪುಸ್ತಕದ ರೂಪವೇ ‘ವಿಸ್ಮಯ ಕೀಟ ಪ್ರಪಂಚ’ ಕೃತಿ.

‘ಅಂಕುರ’ (ಚುಟುಕು ಕವನ ಸಂಕಲನ), ‘ಮರಣೋತ್ತರ ಸತ್ಕಾರ’ (ಕವನ ಸಂಕಲನ), ‘ಹಾಡು ಪುಟಾಣಿ ಪದ’ (ಮಕ್ಕಳ ಕವನ ಸಂಕಲನ) ‘ವರ್ಣಮಾಲೆ ನಾದಲೀಲೆ’ ಮತ್ತು ‘ಮಕ್ಕಳಿಗಾಗಿ ಕಂಪ್ಯೂಟರ್ ಕಲಿಕೆ’ (ಮಕ್ಕಳ ಸಾಹಿತ್ಯ) ಹಾಗೂ ‘ಸಮಗ್ರ ಪೀಡೆ ನಿರ್ವಹಣೆ’ (ಕೃಷಿಯಲ್ಲಿ ಕೀಟ ನಿರ್ವಹಣೆ ಮಾಹಿತಿ) ನೂರ್ ಸಮದ್ ಅಬ್ಬಲಗೆರೆಯವರ ಪ್ರಕಟಿತ ಕೃತಿಗಳು. ‘ಕಂಪ್ಯೂಟರ್ ಎಡೆಡ್ ಇಂಜಿನಿಯರಿಂಗ್ ಡ್ರಾಯಿಂಗ್’ (ಇಂಜಿನಿಯರಿಂಗ್ ಪಠ್ಯ ಪುಸ್ತಕ)ವನ್ನು ಇವರು ಕನ್ನಡಕ್ಕೆ ಅನುವಾದಿಸಿದ್ದು ಮುದ್ರಣ ಹಂತದಲ್ಲಿದೆ. ಇವರ ಕಥಾ ಸಂಕಲನವೊಂದು ಶೀಘ್ರವೇ ಪ್ರಕಟಗೊಳ್ಳಲಿದೆ.

ಕನ್ನಡ ಸಾಹಿತ್ಯ ಪರಿಷತ್ತು ಕೊಡಮಾಡುವ ‘ಪ್ರೊ. ಡಿ. ಸಿ. ಅನಂತಸ್ವಾಮಿ ಸಂಸ್ಮರಣ ದತ್ತಿ ಪ್ರಶಸ್ತಿ’, ಮೂರು ಸಾವಿರ ಮಠ ಮತ್ತು ನವ ಕರ್ನಾಟಕ ನಿರ್ಮಾಣ ವೇದಿಕೆಯ ‘ಕರ್ನಾಟಕ ರಾಜ್ಯೋತ್ಸವ ಪಶಸ್ತಿ’, ‘ಮರಣೋತ್ತರ ಸತ್ಕಾರ’ ಶೀರ್ಷಿಕೆಯ ಕವನಕ್ಕೆ ರಾಜ್ಯ ಮಟ್ಟದ 2014ನೇ ಸಾಲಿನ ‘ಡಾ. ಜಿ.ಎಸ್.ಎಸ್. ಕಾವ್ಯಶ್ರೀ’ ಪ್ರಶಸ್ತಿ, 2014ನೇ ಸಾಲಿನ ‘ಕನ್ನಡ ರತ್ನ ಪಶಸ್ತಿ’, ‘ವಿಶ್ವಕವಿ ಕುವೆಂಪು ಕಾವ್ಯ ಪುರಸ್ಕಾರ’ , ಡಿ.ಆರ್.ಡಿ.ಓ(ಡಿಪಾರ್ಟಮೆಂಟ್ ಆಫ್ ಎನ್ವಿರಾನ್‌ಮೆಂಟಲ್ ರಿಸರ್ಚ್ ಆರ್ಗನೈಸೇಶನ್)ಸಂಸ್ಥೆ ಕೊಡಮಾಡುವ ‘ಅತ್ಯುತ್ತಮ ಕೀಟಶಾಸ್ತ್ರಜ್ಞ’ ರಾಷ್ಟ್ರ ಪ್ರಶಸ್ತಿ, ಹಾಗೂ ಲಿಮ್ಕಾ ಮತ್ತು ಆರ್ಯಭಟ’ ಅಂತಾರಾಷ್ಟ್ರೀಯ ಪ್ರಶಸ್ತಿಗಳು ಇವರ ಸೇವೆಗೆ ಸಂದಿರುವ ಕೆಲವು ಪುರಸ್ಕಾರಗಳು.

ದೂರದರ್ಶನದ ಚಂದನವಾಹಿನಿಯಲ್ಲಿ ವಾರ್ತಾ ವಾಚಕ ಮತ್ತು ಕಾರ್ಯಕ್ರಮ ನಿರೂಪಕರಾಗಿ ಸೇವೆ ಸಲ್ಲಿಸುತ್ತಿರುವ ಇವರ ಕೀಟಶಾಸ್ತ್ರದ ಸಂಶೋಧನೆಯ ಹಲವಾರು ವೈಜ್ಞಾನಿಕ ಆಂಗ್ಲ ಲೇಖನಗಳು ರಾಷ್ಟ್ರೀಯ ನಿಯತಕಾಲಿಕ ಮತ್ತು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ದೇಶ ವಿದೇಶಗಳ ಅನೇಕ ಕವಿಗೋಷ್ಠಿಗಳಲ್ಲಿ ಕವನ ವಾಚನ ಮತ್ತು ಅಧ್ಯಕ್ಷತೆ ವಹಿಸಿರುವ ಇವರು ಉತ್ತಮ ವಾಗ್ಮಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಚಲನಚಿತ್ರ ನಟರಾಗಿ, ನಾಟಕಕಾರರಾಗಿ ಜನಮನ ಗೆದ್ದಿದ್ದಾರೆ.

ಸಾಹಿತಿ ಮತ್ತು ಕಲಾವಿದರಾಗಿದ್ದ ತನ್ನ ತಂದೆ ದಿ. ಅಬ್ಬಾಸ್ ಅಬ್ಬಲಗೆರೆಯವರ ಸ್ಮರಣಾರ್ಥ ‘ಕೋಮು ಘರ್ಷಣೆಗಳಿಗೆ ಕಾರಣ ಮತ್ತು ನಿವಾರಣೋಪಾಯಗಳು’ ಎಂಬ ಕೋಮು ಸೌಹಾರ್ದತೆಯ ಬಗೆಗಿನ ದತ್ತಿಯೊಂದನ್ನು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ 2014ರಲ್ಲಿ ಸ್ಥಾಪಿಸಿದ್ದಾರೆ.

ದಿವಂಗತ ಯು.ಟಿ. ಫರೀದ್ ಸ್ಮರಣಾರ್ಥ ನೀಡಲಾಗುವ ಈ ಪ್ರಶಸ್ತಿಯು ಹತ್ತು ಸಾವಿರ ನಗದು ಮತ್ತು ಪ್ರಶಸ್ತಿ ಫಲಕಗಳನ್ನೊಳಗೊಂಡಿದ್ದು, 2023ರ ಜನವರಿಯಲ್ಲಿ ಮಂಗಳೂರಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಗೆ 17 ಕೃತಿಗಳು ಬಂದಿದ್ದು, ಪತ್ರಕರ್ತ ಬಿ.ಎಂ. ಬಶೀರ್, ಪ್ರಾಧ್ಯಾಪಕ ಅಬ್ದುಲ್ ರಝಾಕ್ ಅನಂತಾಡಿ ಮತ್ತು ಕತೆಗಾರ್ತಿ ಫಾತಿಮಾ ರಲಿಯಾ ತೀರ್ಪುಗಾರರಾಗಿ ಸಹಕರಿಸಿದ್ದಾರೆ ಎಂದು ಮುಸ್ಲಿಮ್ ಲೇಖಕರ ಸಂಘದ ಅಧ್ಯಕ್ಷ ಉಮರ್ ಯು.ಹೆಚ್. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Posts

Leave a Reply

Your email address will not be published.