ಶ್ರೀ ಹನುಮಾನ್ ಮಂದಿರ ಎಡಪದವು ‘ಸ್ವಾತಂತ್ರ್ಯ ಅಮೃತ ಮಹೋತ್ಸವ’ ಆಚರಣೆ
ಶ್ರೀ ಹನುಮಾನ್ ಮಂದಿರ (ರಿ) ಎಡಪದವು ಇದರ ಮುಂದಾಳುತ್ವದಲ್ಲಿ ಸ್ಥಳೀಯ ಶಾಲಾ- ಕಾಲೇಜುಗಳ ಸಹಭಾಗಿತ್ವದಲ್ಲಿ ಭಾರತದ ‘ಸ್ವಾತಂತ್ರ್ಯದ ಅಮೃತ ಮಹೋತ್ಸವ’ವನ್ನು ಅತ್ಯಂತ ವೈಭವೋಪೇತ ವಾಗಿ ಎಡಪದವಿನಲ್ಲಿ ಆಚರಿಸಲಾಯಿತು. ಎಡಪದವು ಗ್ರಾಮದ ಕಣ್ಣೋರಿ ಹಿರಿಯ ಪ್ರಾಥಮಿಕ ಶಾಲೆ, ಬ್ರಿಂಡೇಲ್ ಹಿರಿಯ ಪ್ರಾಥಮಿಕ ಶಾಲೆ, ಎಡಪದವು ಹಿರಿಯ ಪ್ರಾಥಮಿಕ ಶಾಲೆ, ಬೋರುಗುಡ್ಡೆ ಹಿರಿಯ ಪ್ರಾಥಮಿಕ ಶಾಲೆ, ಸ್ವಾಮೀ ವಿವೇಕಾನಂದ ಪ್ರೌಡ ಶಾಲೆ, ಸ್ವಾಮೀ ವಿವೇಕಾನಂದ ಪದವಿ ಪೂರ್ವ ಕಾಲೇಜು, ಐಡಿಯಲ್ ಆಂಗ್ಲ ಮಾಧ್ಯಮ ಶಾಲೆ, ಗ್ರಾಮ ಪಂಚಾಯತ್ ಮತ್ತು ರಿಕ್ಷಾ ಚಾಲಕ ಮಾಲಕರ ಸಹಭಾಗಿತ್ವದಲ್ಲಿ ನಡೆದ ಈ ಕಾರ್ಯಕ್ರಮ ನ ಭೂತೋ ನ ಭವಿಷ್ಯತೀ… ಎನ್ನುವ ರೀತಿಯಲ್ಲಿ ಅತ್ಯಂತ ವ್ಯವಸ್ಥಿತವಾಗಿ ವೈಭವದಿಂದ ನಡೆಯಿತು. ಹನುಮಾನ್ ಮಂದಿರದ ವಠಾರದಲ್ಲಿ ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ವಿಜಯ ಇವರು ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾಜಿ ತಾ. ಪಂ. ಸದಸ್ಯರಾದ ನೊಬರ್ಟ್ ಮಥಾಯಸ್, ಪೃಥ್ವಿ ರಾಜ್ ಆರ್ ಕೆ. ಹಾಗೂ ಹನುಮಾನ್ ಮಂದಿರದ ಪದಾಧಿಕಾರಿಗಳು, ಹನುಮಾನ್ ಸೇವಾ ಸಮಿತಿಯ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು. ಹನುಮಾನ್ ಮಂದಿರದ ಅಧ್ಯಕ್ಷರಾದ ವಿಜಯ ಗೌಡರವರು ಸ್ವಾತಂತ್ರ್ಯ ಅಮೃತ ಮಹೋತ್ಸವದ ಬಗ್ಗೆ ಮಾತನಾಡಿದರು.
ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಲಘು ಪಾನೀಯ ಹಾಗೂ ಸಿಹಿ ತಿಂಡಿಯ ವಿತರಣೆಯ ನಂತರ ಹನುಮಾನ್ ದೇವರಿಗೆ ಪ್ರಾರ್ಥನೆ ಸಲ್ಲಿಸಿ, ಚಂಡೆ, ಬ್ಯಾಂಡ್ ಹಾಗೂ ದೇಶ ಭಕ್ತಿಯ ಹಾಡುಗಳ ಜೊತೆಗೆ, ಭಾರತ ಮಾತೆಯ ಟ್ಯಾಬ್ಲೋ ದ ಭವ್ಯ ಮೆರವಣಿಗೆಯನ್ನು ಪ್ರಾರಂಭಿಸಲಾಯಿತು. ಹನುಮಾನ್ ಮಂದಿರದದಿಂದ ಹೊರಟ ಈ ಮೆರವಣಿಗೆ ಎಡಪದವು ಪೇಟೆಯಲ್ಲಿ ಸಾಗಿ ಸ್ವಾಮೀ ವಿವೇಕಾನಂದ ಕಾಲೇಜಿನಲ್ಲಿ ಸಮಾಪನ ಗೊಂಡಿತು. ವಿದ್ಯಾರ್ಥಿಗಳು, ಸಾರ್ವಜನಿಕರು ಆಟೋ ರಿಕ್ಷಾ ಚಾಲಕರು ಸಾವಿರ ಸಂಖ್ಯೆಯಲ್ಲಿ ಈ ಶೋಭಾಯಾತ್ರೆಯಲ್ಲಿ ಪಾಲ್ಗೊಂಡು ತಾಯಿ ಭಾರತಿ ಬ್ರಿಟಿಷರ ಆಳ್ವಿಕೆಯಿಂದ ಸ್ವತಂತ್ರಗೊಂಡ ಅಮೃತ ಮಹೋತ್ಸವಕ್ಕೆ ಸಾಕ್ಷಿಯಾದರು. ಎಡಪದವಿನ ಜುಮ್ಮಾ ಮಸೀದಿ ಯವರು ಈ ಮೆರವಣಿಗೆಯಲ್ಲಿ ಪಾಲ್ಗೊಂಡ ಎಲ್ಲರಿಗೂ ಎಡಪದವು ಪೇಟೆಯಲ್ಲಿ ಪಾನೀಯ ಹಾಗೂ ಸಿಹಿ ತಿಂಡಿಯ ವ್ಯವಸ್ಥೆ ಮಾಡಿದರು. ಎಲ್ಲಾ ಮಕ್ಕಳು ಕೂಡ ತಾಯಿ ಭಾರತಿಯ ಜೈಕಾರ ಹಾಗೂ ವಂದೆ ಮಾತರಂ ಘೋಷಣೆಗಳನ್ನು ಹಾಕುವುದರ ಮೂಲಕ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಾಣಾರ್ಪಣೆ ಮಾಡಿದ ಬಲಿದಾನಿಗಳನ್ನು ನೆನಪಿಸಿಕೊಂಡರು.
ವಿವೇಕಾನಂದ ಕಾಲೇಜಿನ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ವಕ್ತಾರರಾಗಿ ಉದಯವಾಣಿ ದಿನಪತ್ರಿಕೆಯ ಶ್ರೀ ರಾಮಚಂದ್ರ ಮಿಜಾರ್ ಇವರು ಭಾಗವಹಿಸಿ ಸ್ವಾತಂತ್ರ್ಯ ಹೋರಾಟದ ಕೆಲವು ಪ್ರಸಂಗಗಳನ್ನು ವಿವರಿಸುವುದರ ಜೊತೆಗೆ ಪ್ರಕೃತಿ ರಕ್ಷಣೆ ಹಾಗೂ ನವಭಾರತ ಕಟ್ಟುವಲ್ಲಿ ಯುವಜನತೆಯ ಪಾತ್ರದ ಕುರಿತು ಮಾತನಾಡಿದರು. ಇದಕ್ಕೂ ಮೊದಲು ಪ್ರಾಸ್ತಾವಿಕ ವಾಗಿ ಮಾತನಾಡಿದ ಶ್ರೀಮತಿ ವಿದ್ಯಾ ಮಲ್ಯ ಇವರು ಹನುಮಾನ್ ಮಂದಿರದ ದ್ಯೇಯೊದ್ಧೇಶದ ಜೊತೆಗೆ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನದ ಕತೆ, ತ್ರಿವರ್ಣದ ಮಹತ್ವದ ಜೊತೆಗೆ ಸಾಮಾಜಿಕ ಸಹಬಾಳ್ವೆಯ ಮಹತ್ವವನ್ನು ತಿಳಿಸಿದರು. ಎಡಪದವು ಸ್ವಾಮೀ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪದ್ಮನಾಭ ಹೆಚ್. ಇವರು ಅಧ್ಯಕ್ಷತೆ ವಹಿಸಿದ್ದರು. ವಿಜಯ ಗೌಡ ಶಿಬ್ರಿಕೆರೆ ಇವರು ವಂದೇಮಾತರಂ ಹಾಡಿದರು. ನಿತೇಶ್ ಇವರು ವೈಯಕ್ತಿಕ ಗೀತೆ ಹಾಡಿದರು. ವೇದಿಕೆಯಲ್ಲಿ ಎಲ್ಲಾ ಸ್ಥಳೀಯ ಶಾಲಾ ಕಾಲೇಜುಗಳ ಮುಖ್ಯೋಪಾಧ್ಯಾಯರು, ಎಡಪದವು ಪಂಚಾಯತ್ ಅಧ್ಯಕ್ಷರಾದ ಸುಕುಮಾರ ದೇವಾಡಿಗ, ಹನುಮಾನ್ ಮಂದಿರದ ಅಧ್ಯಕ್ಷ ರಾದ ವಿಜಯ ಗೌಡ ಶಿಬ್ರಿಕೆರೆ ಇವರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಂತರ ಬಂದಂತಹ ಎಲ್ಲರಿಗೂ ಹನುಮಾನ್ ಮಂದಿರದ ವತಿಯಿಂದ ಊಟದ ವ್ಯವಸ್ಥೆ ಮಾಡಲಾಯಿತು. ಒಟ್ಟಿನಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಅತ್ಯಂತ ಸುಂದರವಾಗಿ ಊರಿನ ಹಬ್ಬದ ರೀತಿಯಲ್ಲಿ ಸಮಾಜದ ಎಲ್ಲಾ ಧರ್ಮದವರ ಹಾಗೂ ಎಲ್ಲಾ ವರ್ಗದವರ ಜೊತೆ ಸೇರಿ ಆಚರಿಸಿದ ಕ್ಷಣಗಳಿಗೆ ಎಡಪದವು ಊರು ಸಾಕ್ಷಿಯಾಯಿತು