ಯಕ್ಷಧ್ರುವ ಪಟ್ಲ ಫೌಂಡೇಶನ್ ಕಲಾವಿದರು ಅಮೇರಿಕಕ್ಕೆ ಪ್ರಯಾಣ
ಮಂಗಳೂರು: “ಜುಲೈ ೯ರಂದು ಯಕ್ಷದ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಕಲಾವಿದರ ತಂಡ ಯಕ್ಷಗಾನ ಅಭಿಯಾನಕ್ಕಾಗಿ ಅಮೆರಿಕ ಪ್ರವಾಸ ಕೈಗೊಳ್ಳುತ್ತಿದೆ. ಯಕ್ಷದ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಯುಎಸ್‌ಎ ಆಯೋಜನೆಯನ್ನು ಮಾಡುತ್ತಿದೆ. ಅಮೇರಿಕಾದ ೨೦ ರಾಜ್ಯಗಳ ಮುಖ್ಯ ನಗರಗಳಲ್ಲಿ ನಿಶ್ಚಯಿಸಿರುತ್ತಾರೆ” ಎಂದು ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಮಾಹಿತಿ ನೀಡಿದರು.
ಅವರು ಮಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. “ತಂಡದಲ್ಲಿ ಹಿಮ್ಮೇಳದ ಕಲಾವಿದರಾಗಿ ಪಟ್ಲ ಸತೀಶ್ ಶೆಟ್ಟಿ, ಪದ್ಮನಾಭ ಉಪಾಧ್ಯ, ಚೈತನ್ಯ ಕೃಷ್ಣ ಪದ್ಯಾಣ ಹಾಗೂ ಮುಮ್ಮೇಳದಲ್ಲಿ ಪ್ರೊ.ಎಂಎಲ್ ಸಾಮಗ, ಹರಿನಾರಾಯಣ ಭಟ್ ಎಡನೀರು, ಚಂದ್ರಶೇಖರ ಧರ್ಮಸ್ಥಳ, ಮಹೇಶ ಮಣಿಯಾಣಿ, ಪ್ರಶಾಂತ್ ನೆಲ್ಯಾಡಿ, ಮೋಹನ ಬೆಳ್ಳಿಪಾಡಿ ಹೀಗೆ ಒಂಬತ್ತು ಮಂದಿಯ ತಂಡ ಸುಮಾರು ೭೫ ದಿವಸಗಳ ಕಲಾ ಪ್ರವಾಸ ಕೈಗೊಳ್ಳಲಿದೆ. ಪುತ್ತಿಗೆ ಮಠಗಳು, ಕನ್ನಡ ಕೂಟದವರು, ಯಕ್ಷಗಾನ ಸಂಘದವರು, ದೇವಸ್ಥಾನಗಳು ಹಾಗೂ ಬೇರೆ ಬೇರೆ ಸಂಘ ಸಂಸ್ಥೆಗಳು ನಮಗೆ ಸಹಕಾರ ನೀಡಲಿದ್ದಾರೆ. ಪೌರಾಣಿಕ ಕಥಾನಕಗಳನ್ನು ಆಯ್ದುಕೊಂಡು ನಾವು ಪ್ರದರ್ಶನ ನೀಡಲಿದ್ದೇವೆ. ಕೆಲವು ಕಡೆ ಕಿರು ತರಬೇತಿ ಶಿಬಿರ ಪ್ರಾತ್ಯಕ್ಷಿಕೆಗಳನ್ನು ಕೂಡಾ ನಡೆಸಲಿದ್ದೇವೆ” ಎಂದರು.
“ಎರಡು ವರ್ಷಗಳಿಗೊಮ್ಮೆ ಅಮೆರಿಕದಲ್ಲಿ ನಡೆಯುವ ಬಲು ವಿಜೃಂಭಣೆಯ ಅಕ್ಕ ಸಮ್ಮೇಳನದಲ್ಲಿಯೂ ನಮ್ಮ ಯಕ್ಷಧ್ರುವ ಪಟ್ಲ ಫೌಂಡೇಶನ್ ತಂಡ ಕಾರ್ಯಕ್ರಮ ನೀಡಲಿದೆ ಎನ್ನುವುದು ಬಹಳ ಹೆಮ್ಮೆಯ ಸಂಗತಿಯಾಗಿದೆ ಎಂದರು.ಸುದ್ದಿಗೋಷ್ಠಿಯಲ್ಲಿ , ಪ್ರೊ ಎಂ ಎಲ್ ಸಾಮಗ, ಪದ್ಮನಾಭ ಉಪಾಧ್ಯ, ಚೈತನ್ಯ ಕೃಷ್ಣ ಪದ್ಯಾಣ, ಹರಿನಾರಾಯಣ ಭಟ್ ಎಡನೀರು, ಚಂದ್ರಶೇಖರ ಧರ್ಮಸ್ಥಳ, ಮಹೇಶ ಮಣಿಯಾಣಿ, ಪ್ರಶಾಂತ್ ನೆಲ್ಯಾಡಿ, ಮೋಹನ ಬೆಳ್ಳಿಪಾಡಿ ಮತ್ತಿತರರು ಉಪಸ್ಥಿತರಿದ್ದರು.