ಎಣ್ಣೆಹೊಳೆ ಡ್ಯಾಮ್‍ನಲ್ಲಿ ಕ್ರಿಕೆಟ್ ಆಡಿ ಪ್ರತಿಭಟಿಸಿದ ಮುತಾಲಿಕ್ ಟೀಮ್

ಅಜೆಕಾರು ಎಣ್ಣೆಹೊಳೆ ಎಂಬಲ್ಲಿ ಸ್ವರ್ಣ ನದಿಗೆ ನಿರ್ಮಿಸಲಾಗಿದ್ದ ಎಣ್ಣೆಹೊಳೆ ಏತನೀರಾವರಿ ಯೋಜನೆ ಸಂಪೂರ್ಣ ವಿಫಲವಾಗಿದೆ. ರೂ. 138 ಕೋಟಿ ಹಣವನ್ನು ಪೋಲುಮಾಡಲಾಗಿದೆ. ಮಹಾಭ್ರಷ್ಟಾಚಾರ ಇದಾಗಿದ್ದು, ಸಂಬಂಧ ಪಟ್ಟ ಇಲಾಖಾಧಿಕಾರಿಗಳನ್ನು ನ್ಯಾಯಾಲಯದ ಕಟಕಟೆಯಲ್ಲಿ ನಿಲ್ಲಿಸುತ್ತೇನೆಂದು ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ.
ಅಭಿವೃದ್ಧಿಯ ಹೆಸರಿನಲ್ಲಿ ಕೆಲವೇ ಕೆಲ ವ್ಯಕ್ತಿಗಳು ಅಭಿವೃದ್ಧಿ ಹೊಂದುತ್ತಿದ್ದಾರೆ. ಬಿಟ್ಟಿ ಪ್ರಚಾರಕ್ಕಾಗಿ ಈ ಯೋಜನೆಯನ್ನು ಅನುಷ್ಠಾನ ಗೊಳಿಸಲಾಗಿದೆ. ರೂ. 108 ಕೋಟಿ ವೆಚ್ಚದಲ್ಲಿ ಎಣ್ಣಿಹೊಳೆ ನೀರಾವರಿ ಯೋಜನೆಗಾಗಿ ಹಣ ವ್ಯಯಿಸಿದರೆ ಮತ್ತೇ ಅದರ ಮುಂದುವರಿದ ಭಾಗವಾಗಿ ರೂ. 30 ಕೋಟಿ ಹಣವನ್ನು ತಡೆಗೋಡೆಗೆ ವ್ಯಯಿಸಿರುವ ಮೂಲಕ ಒಟ್ಟು ರೂ 138 ಕೋಟಿ ವ್ಯಯಿಸಿದರೂ ಡ್ಯಾಂನಲ್ಲಿ ಒಂದು ಚೆಂಬು ನೀರಿಲ್ಲ ಎಂದು ಆಕ್ರೋಶ ಭರಿತರಾಗಿ ಆರೋಪಿಸಿದರು.
ಮುಖ್ಯ ಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಯೋಜನೆಯನ್ನು ಉದ್ಘಾಟಿಸಿ ಒಂದು ವರ್ಷ ಸಂದಿಲ್ಲ. ಪ್ರತಿಯೊಂದು ಯೋಜನೆಗೆ ಕೋಟಿ ಕೋಟಿ ಅನುದಾನ ಬಿಡುಗಡೆಗೊಳ್ಳುತ್ತಿದೆ. ಅದನ್ನು ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ ಎಂಬುವುದಕ್ಕೆ ಇದೊಂದು ತಾಜಾ ಉದಾಹರಣೆ ಎಂದು ಅವರು ಇದೇ ಸಂದರ್ಭದಲ್ಲಿ ಆರೋಪಿಸಿದರು.
ಬಹುಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಎಣ್ಣೆಹೊಳೆ ಏತ ನೀರಾವರಿ ಯೋಜನೆಯಲ್ಲಿ ನಿರ್ಮಾಣ ಗೊಂಡ ಡ್ಯಾಂನಲ್ಲಿ ಪ್ರಮೋದ್ ಮುತಾಲಿಕ್ ಹಾಗೂ ಅವರ ತಂಡ ಕ್ರಿಕೆಟ್ ಆಟವಾಡುವ ಮೂಲಕ ಜನವಿರೋಧಿ ಯೋಜನೆಯ ವಿರುದ್ಧ ಪ್ರತಿಭಟನೆ ನಡೆಸಿದರು.
