ಅಸಂಘಟಿತ ಕಾರ್ಮಿಕರಿಗೆ ಸರ್ಕಾರದಿಂದ ಪರಿಹಾರ ಧನ : ಡಾ. ರಾಜೇಂದ್ರ ಕೆ.ವಿ

ಮಂಗಳೂರು: ಕೊರೋನಾ ಸೋಂಕು ವ್ಯಾಪಕವಾಗಿ ಹರಡುವ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಕೊರೋನಾ ಕರ್ಫ್ಯೂ ವಿಧಿಸಿದ್ದು ಇದರಿಂದ ಜಿಲ್ಲೆಯ ಅಸಂಘಟಿತ ವಲಯದ ಕಾರ್ಮಿಕರಿಗೆ ತೊಂದರೆಯಾದ ಹಿನ್ನಲೆ ರಾಜ್ಯ ಸರಕಾರ ಕಾರ್ಮಿಕರಿಗೆ ರೂ. 2,೦೦೦ ಪರಿಹಾರಧನವನ್ನು ನೀಡಲಿದೆ ಎಂದು ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ ಅವರು ತಿಳಿಸಿದರು.

ಅವರು ತಮ್ಮ ಕಚೇರಿ ಸಭಾಂಗಣದಲ್ಲಿ ಅಸಂಘಟಿತ ವಲಯದ ಕಾರ್ಮಿಕರಿಗೆ ಪರಿಹಾರ ನೀಡುವ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.ಕೊರೋನಾ ಕರ್ಫ್ಯೂನಿಂದ ಉದ್ಯೋಗ ಕಳೆದುಕೊಂಡು ಆರ್ಥಿಕವಾಗಿ ಸಂಕಷ್ಟಕ್ಕೊಳಗಾದ ಅಸಂಘಟಿತ ಕಾರ್ಮಿಕರುಗಳಾದ 18 ರಿಂದ 65ವರ್ಷದೊಳಗಿನ ಕ್ಷೌರಿಕ, ಅಗಸ, ಟೈಲರ್, ಅಕ್ಕಸಾಲಿಗ, ಕಮ್ಮಾರರು, ಕುಂಬಾರರು, ಗೃಹಕಾರ್ಮಿಕರು, ಚಿಂದಿ ಆಯುವವರು, ಹಮಾಲಿ, ವೃತ್ತಿಯನ್ನು ನಿರ್ವಹಿಸುತ್ತಿರುವ ಕಾರ್ಮಿಕರುಗಳು ಒಂದು ಬಾರಿ ಪರಿಹಾರವನ್ನು ಪಡೆಯಲು ಅರ್ಹ ಫಲಾನುಭವಿಗಳು ಸೇವಾ ಸಿಂಧುಗಳ ಮೂಲಕ ಅರ್ಜಿ ಸಲ್ಲಿಸಿ ಇದರ ಲಾಭ ಪಡೆಯಬಹುದಾಗಿದೆ ಎಂದರು.
ಫಲಾನುಭವಿಗಳು ತಾವು ಕೆಲಸ ನಿರ್ವಹಿಸುತ್ತಿರುವ ವ್ಯಾಪ್ತಿಯ ಸೇವಾಸಿಂಧು ಕೇಂದ್ರದ ಸೇವಾಸಿಂಧು ಪೋರ್ಟಲ್‌ನಲ್ಲಿ ನಿಗಧಿತ ಅರ್ಜಿಯಲ್ಲಿ ಮಾಹಿತಿ ಭರ್ತಿ ಮಾಡಿ, ಬ್ಯಾಂಕ್ ಖಾತೆಯೊಂದಿಗೆ ಜೋಡನೆಯಾಗಿರುವ ಆಧಾರ್‌ಕಾರ್ಡ್, ವಿಳಾಸ ದೃಢೀಕರಣದ ಪಡಿತರಚೀಟಿ, ಚುನಾವಣಾ ಗುರುತಿನ ಚೀಟಿ, ಮೊಬೈಲ್ ಸಂಖ್ಯೆ, ಸ್ವಯಂಘೋಷಣಾ ಪತ್ರ, ಉದ್ಯೋಗ ಪ್ರಮಾಣ ಪತ್ರ ಹಾಗೂ ತಮ್ಮ ಛಾಯಾಚಿತ್ರವನ್ನು ಅಪಲೋಡ್ ಮಾಡಬೇಕು ಎಂದರು.
ಕ್ಷೌರಿಕ, ಅಗಸ ವೃತ್ತಿಯನ್ನು ನಿರ್ವಹಿಸುತ್ತಿರುವ ಕುರಿತು ಉದ್ಯೋಗ ಪ್ರಮಾಣ ಪತ್ರ, ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿಯ ಕಂದಾಯ ಅಧಿಕಾರಿ, ಕಂದಾಯ ನಿರೀಕ್ಷಕರು, ಹಾಗೂ ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರರು, ಉಪತಹಸೀಲ್ದಾರರು, ಕಂದಾಯ ನಿರೀಕ್ಷಕರು, ಕಂದಾಯ ಅಧಿಕಾರಿಗಳು, ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿ. ಕಾರ್ಮಿಕ ಇಲಾಖೆಯ ನಿರೀಕ್ಷಕರು, ಕಾರ್ಮಿಕ ಅಧಿಕಾರಿಗಳು, ಸಹಾಯಕ ಕಾರ್ಮಿಕ ಆಯುಕ್ತರು, ಯಾವುದಾದರೊಂದು ಅಧಿಕಾರಿಯಿಂದ ದೃಢೀಕರಿಸಿ ಮೂಲ ಪ್ರತಿಯನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಬೇಕು ಎಂದರು.
ಒಂದು ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ಜನರು ವೃತ್ತಿಯಲ್ಲಿ ತೊಡಗಿದ್ದಲ್ಲಿ ಒಬ್ಬರು ಮಾತ್ರ ಪರಿಹಾರ ಧನವನ್ನು ಪಡೆಯಲು ಅರ್ಹರಾಗಿರುತ್ತಾರೆ ಎಂದರು.ಜಿಲ್ಲೆಯಲ್ಲಿ ಕಾರ್ಮಿಕ ಇಲಾಖೆಯಡಿ ಒಟ್ಟು 86,೦೦೦ ಕಟ್ಟಡ ಕಾರ್ಮಿಕರು ಹಾಗೂ 7,597ಅಸಂಘಟಿತರು ಈಗಾಗಲೇ ನೋಂದಣಿಯಾಗಿರುತ್ತಾರೆ ಎಂದ ಅವರು ಶ್ರಮಿಕರ ವರ್ಗದವರಲ್ಲಿ ಬಿ.ಪಿ.ಎಲ್. ಕಾರ್ಡ್ ಅಥವಾ ಟ್ರೇಡ್ ಲೈಸನ್ಸ್ ಹೊಂದಿರುವವರು ಎಲ್ಲರಿಗೂ ಎಲ್ಲಾ ಪ್ಯಾಕೇಜ್ ಗಳು ಸಿಗುವಂತಹಾ ಜವಾಬ್ದಾರಿಯನ್ನು ಅಧಿಕಾರಿಗಳು ಮಾಡಬೇಕು ಎಂದರು

ಕಟ್ಟಡ ಕಾರ್ಮಿಕರು ಕಾರ್ಮಿಕ ಕಾರ್ಡ್ ಹೊಂದಿದಲ್ಲಿ ಮತ್ತೊಮ್ಮೆ ಸೇವಾ ಸಿಂಧು ಪೋರ್ಟಲ್ ನಲ್ಲಿ ನೋಂದಣಿ ಮಾಡುವ ಅಗತ್ಯತೆ ಇರುವುದಿಲ್ಲ. ಅವರ ಖಾತೆಗೆ ನೇರವಾಗಿ ಜಮೆಯಾಗಲಿದೆ ಎಂದರು.
ಕಳೆದ ಬಾರಿ ಅಗಸರು ಹಾಗೂ ಕ್ಷೌರಿಕರಿರಲ್ಲಿ ನೋಂದಣಿ ಮಾಡಿ ಖಾತೆಗೆ ಹಣ ಜಮೆಯಾಗದವರೂ ಸಹ ಈ ಬಾರಿ ಇನ್ನೊಮ್ಮೆ ಸೇವಾ ಸಿಂಧು ಮೂಲಕ ನೋಂದಣಿ ಮಾಡಲು ಅವಕಾಶವಿರುತ್ತದೆ ಎಂದರು.
ಹೊರರಾಜ್ಯದಿಂದ ಜಿಲ್ಲೆಗೆ ಬಂದು ಇಲ್ಲಿಯ ಕಾರ್ಮಿಕರಾಗಿದ್ದು ಜೊತೆಗೆ ಇಲ್ಲಿನ ಬಿ.ಪಿ.ಎಲ್ ಕಾರ್ಡ್ ಹೊಂದಿದವರೂ ಕೂಡ ಇದರ ಲಾಭ ಪಡೆಯಬಹುದಾಗಿದೆ ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕುಮಾರ್, ನಗರಾಭಿವೃದ್ಧಿ ಕೋಶದ‘ ಯೋಜನಾ ನಿರ್ದೇಶಕಿ ಗಾಯತ್ರಿ ನಾಯಕ್, ಕಾರ್ಮಿಕ ಅಧಿಕಾರಿ ವಿಲ್ಮಾ, ಇತರೆ ಕಾರ್ಮಿಕ ಸಂಘದ ಅದ್ಯಕ್ಷರು ಹಾಗೂ ಉಪಾಧ್ಯಕ್ಷರು ಉಪಸ್ಥಿತರಿದ್ದರು.

 

Related Posts

Leave a Reply

Your email address will not be published.