ಕತ್ತು ಕೊಯ್ದ ಸ್ಥಿತಿಯಲ್ಲಿ ಕೋಣ ಪತ್ತೆ
ಉಳ್ಳಾಲ: ತೋಟಕ್ಕೆ ಬಂದ ಕೋಣದ ಕತ್ತು ಕೊಯ್ದು ಹತ್ಯೆ ನಡೆಸಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕೊಲ್ಯ ಬಳಿಯ ಬಲ್ಯ ಎಂಬಲ್ಲಿ ನಡೆದಿದೆ. ವಿಚಾರ ಬೆಳಕಿಗೆ ಬರುತ್ತಿದ್ದಂತೆ ಹಿಂದೂ ಸಂಘಟನೆ ಕಾರ್ಯಕರ್ತರು ಜಮಾಯಿಸಿ ತೋಟದ ಮಾಲೀಕನೇ ಕೋಣವನ್ನು ಬೇರೆಯವರ ಮೂಲಕ ಹತ್ಯೆ ನಡೆಸಿರುವುದಾಗಿ ಆರೋಪಿಸಿದ್ದಾರೆ.ಬಲ್ಯ ಎಂಬಲ್ಲಿರುವ ಜಯರಾಮ ಶೆಟ್ಟಿ ಎಂಬವರ ತೋಟದ ಬಳಿ ಕೃತ್ಯ ನಡೆದಿದೆ. ಕೋಣದ ಕುತ್ತಿಗೆಯನ್ನು ಹರಿತವಾದ ಆಯುಧದಿಂದ ಕಡಿದ ಸ್ಥಿತಿಯಲ್ಲಿದ್ದು, ರಕ್ತಸ್ರಾವ ಆಗಿ ಕೋಣ ಸತ್ತು ಬಿದ್ದಿದೆ. ಈ ಬಗ್ಗೆ ಸ್ಥಳೀಯರು ಗಮನಿಸಿ ಹಿಂದೂ ಸಂಘಟನೆ ಕಾರ್ಯಕರ್ತರಿಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯರು ಸ್ಥಳಕ್ಕೆ ಬಂದಾಗ ಕೃತ್ಯ ನಡೆದ ಸ್ಥಳದ ಬಳಿ ಆಕ್ಸೆಸ್ ಸ್ಕೂಟರ್ ಪತ್ತೆಯಾಗಿದೆ. ಕೃತ್ಯ ನಡೆಸಿ ಆರೋಪಿಗಳು ಸ್ಕೂಟರನ್ನು ಬಿಟ್ಟು ಪರಾರಿಯಾಗಿದ್ದಾರೆ. ಅಲ್ಲದೆ ತೋಟಕ್ಕೆ ನುಗ್ಗುತ್ತಿದ್ದ ಕೋಣವನ್ನು ಜಯರಾಮ ಶೆಟ್ಟಿ ಎಂಬವರು ಬೇರೆಯವರ ಮುಖೇನ ಹತ್ಯೆ ನಡೆಸಿದ್ದಾರೆ ಎಂದು ಹಿಂದೂ ಸಂಘಟನೆಯ ಅರ್ಜುನ್ ಮಾಡೂರು ಉಳ್ಳಾಲ ಠಾಣಾಧಿಕಾರಿ ಸಂದೀಪ್ ಎಸ್. ಅವರಲ್ಲಿ ಆರೋಪಿಸಿದ್ದಾರೆ. ಅದರಂತೆ ಜಯರಾಮ ಶೆಟ್ಟಿ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕೋಣದ ಮೃತದೇಹದ ಶವಮಹಜರು ನಡೆಸಿದ ಬಳಿಕವೇ ಹತ್ಯೆ ನಡೆಸಿರುವ ವಿಧಾನ ಪತ್ತೆಯಾಗಲಿದೆ ಎಂದು ಉಳ್ಳಾಲ ಪೊಲೀಸರು ತಿಳಿಸಿದ್ದಾರೆ.