Header Ads
Breaking News

ಅನಾಥ ಮೃತದೇಹಗಳಿಗೆ ಅಂತ್ಯಸಂಸ್ಕಾರ ನೆರವೇರಿಸುವ ಕಾರ್ಪೋರೇಟರ್

ಅಮಾನವೀಯ ಜನರ ನಡುವೆಯೂ ಮಂಗಳೂರು ಮನಪಾ ಕಾರ್ಪೋರೇಟರೊಬ್ಬರು ವಾರಸುದಾರರಿಲ್ಲದ, ಅಂತ್ಯಸಂಸ್ಕಾರ ನೆರವೇರಿಸಲು ಯಾರೂ ಮುಂದೆ ಬಾರದ ಇಂತಹ ಮೃತದೇಹಗಳಿಗೆ ಸ್ವತಃ ಅಂತ್ಯಕ್ರಿಯೆ ನೆರವೇರಿಸುವ ಮಾನವೀಯ ಕಾರ್ಯ ಮಾಡುತ್ತಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆಯ 26ನೇ ನೈರುತ್ಯ ವಾರ್ಡ್ ದೇರೆಬೈಲ್‍ನ ಕಾರ್ಪೋರೇಟರ್ ಆಗಿರುವ ಗಣೇಶ್ ಕುಲಾಲ್ ಎಂಬವರು ಕಳೆದ ಎರಡು ವಾರಗಳಿಂದ ಈ ಕಾರ್ಯ ಮಾಡುತ್ತಿದ್ದಾರೆ. ಇವರು ಕಳೆದ ಎರಡು ವಾರಗಳಲ್ಲಿ ವಾರಸುದಾರರಿಲ್ಲದ 12 ಮೃತದೇಹಗಳಿಗೆ ಸ್ವತಃ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

ಈವರೆಗೆ ಗಣೇಶ್ ಕುಲಾಲ್ ಅವರು ಅಂತ್ಯಸಂಸ್ಕಾರ ನೆರವೇರಿಸಿರುವ 12 ಮೃತದೇಹಗಳಲ್ಲಿ 9 ಕೊರೊನಾ ಸೋಂಕಿನಿಂದ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟವರೆನ್ನುವುದು ಮತ್ತೊಂದು ವಿಶೇಷ. ಉಳಿದ ಮೂರು ಮಂದಿ ಸಾಮಾನ್ಯ ಮೃತಪಟ್ಟವರು. ಇದರಲ್ಲಿ ಕೇರಳ ರಾಜ್ಯದ ಹಾಗೂ ಮಡಿಕೇರಿ ಜಿಲ್ಲೆಯ ವಾರಿಸುದಾರರಿಲ್ಲದ, ಅಂತ್ಯಕ್ರಿಯೆಗೆ ಕುಟುಂಬಸ್ಥರು ಮುಂದೆ ಬಾರದ ಎರಡು ಮೃತದೇಹಗಳಿಗೆ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಮತ್ತೆಲ್ಲ ಮೃತದೇಹವೂ ಮಂಗಳೂರು ತಾಲೂಕಿಗೆ ಸಂಬಂಧಪಟ್ಟವರದ್ದೇ ಆಗಿದೆ. 12ರಲ್ಲಿ ಐವರು ಮಹಿಳೆಯರಾಗಿದ್ದು, ಉಳಿದ ಏಳು ಮಂದಿ ಪುರುಷರಾಗಿದ್ದಾರೆ. ಈ ಮೃತದೇಹಗಳನ್ನು ನಂದಿಗುಡ್ಡೆ ಹಾಗೂ ಬೋಳೂರು ಚಿತಾಗಾರದಲ್ಲಿ ಅಂತ್ಯಸಂಸ್ಕಾರವನ್ನು ವಿಧಿವತ್ತಾಗಿ ನೆರವೇರಿಸಿದ್ದಾರೆ.

Related posts

Leave a Reply

Your email address will not be published. Required fields are marked *