Header Ads
Breaking News

ವಾಚಕಿಯರ ಸಂಘ ಮಂಗಳೂರು ಸಾಹಿತ್ಯ ಸದನದಲ್ಲಿ ಅನಿತಾ ಟೀಚರ್‌, ದೇವಕಿ ಟೀಚರ್‌ರಿಗೆ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ಪ್ರದಾನ

ತುಳು ಧರ್ಮ ಸಂಶೋಧನಾ ಕೇಂದ್ರ ‌ಪೇರೂರು ಕೊಡಮಾಡಿದ ಸಾವಿತ್ರಿ ಬಾಯಿ ಫುಲೆ ಪ್ರಶಸ್ತಿಯನ್ನು ಕರಾವಳಿ ಲೇಖಕಿಯರ, ವಾಚಕಿಯರ ಸಂಘದ ಮಂಗಳೂರು ಸಾಹಿತ್ಯ ಸದನದಲ್ಲಿ ಅಭಿಮಾನದಿಂದ ಕೊಡಮಾಡಲಾಯಿತು.

ಪೇರೂರು ರುಕ್ಕು ಪೂಜಾರ್ದಿ, ಬಾಗಿ ಪೂಜಾರ್ದಿ, ಲೆಚ್ಚು ಪೂಜಾರ್ದಿ ನೆನಪಿನ ಸಾವಿತ್ರಿ ಬಾಯಿ ಫುಲೆ ಪ್ರಶಸ್ತಿಗಳನ್ನು ಅನಿತಾ ಟೀಚರ್ ಹಾಜರಿದ್ದು ಸ್ವೀಕರಿಸಿದರು. ಕೊರೋನಾ ಕಾರಣದಿಂದ ಬರಲು ನಿರ್ಬಂಧ ಇದ್ದ ದೇವಕಿ ಟೀಚರ್ ಅವರಿಗೆ ಪ್ರಶಸ್ತಿ ತಲುಪಿಸುವ ತೀರ್ಮಾನ ಆಯಿತು.

ಭಾರತೀಯ ಆದಿ ಟೀಚರ್ ಸಾವಿತ್ರಿ ಬಾಯಿ ಫುಲೆ ಅವರು ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ತನ್ನನ್ನು ತಾನು ತೇದುಕೊಂಡವರು. ಅವರು ಯಾರು ಎಂದು ಹೆಚ್ಚಿನ ಹೆಣ್ಣು ಮಕ್ಕಳಿಗೆ ವಿವರಿಸಬೇಕಾದ ಸ್ಥಿತಿ ಇರುವುದು ಭಾರತದ ಸಮಾಜ ಜ್ಞಾನಕ್ಕೆ ತೆರೆದುಕೊಂಡಿಲ್ಲ ಎಂಬುದಕ್ಕೆ ಸೂಚಕ ಎಂದು ಪ್ರಾಸ್ತಾವಿಕ ಮಾತನಾಡಿದ ಬಿ. ಎಂ. ರೋಹಿಣಿಯವರು ಹೇಳಿದರು.

ಕಾರ್ಯಕ್ರಮದ ನಿರೂಪಣೆ ಮಾಡಿದ ಸುಖಲಾಕ್ಷಿ ಸುವರ್ಣರು ಸಾವಿತ್ರಿ ಬಾಯಿ ಫುಲೆಯವರ ಜೀವನದ ಪುಟಗಳನ್ನು ಅವಿಸ್ಮರಣೀಯವಾಗಿ ಆಗಾಗ ವಿವರಿಸಿದರು.

ಪೇರೂರು ತುಳು ಧರ್ಮ ಸಂಶೋಧನಾ ಕೇಂದ್ರದ ನಿರ್ದೇಶಕರಾದ ಪೇರೂರು ಜಾರು ಅವರು ಸಾವಿತ್ರಿ ಬಾಯಿ ಫುಲೆ ಅವರ ಬಗೆಗಿನ ಗುರು ಕತೆ ವಿವರಿಸಿದರು. ಭಾರತದ ಆದಿ ಟೀಚರ್, ಆದಿ ಮುಖ್ಯೋಪಾಧ್ಯಾಯಿನಿ, ಆದಿ ಬಂಡಾಯ ಕವಯಿತ್ರಿ, ಆದಿ ಸ್ತ್ರೀವಾದಿ ಸಾವಿತ್ರಿ ಬಾಯಿ ಅವರ ಬದುಕು ಹೋರಾಟದಲ್ಲೇ ವೀರ ಮರಣದವರೆಗೆ ಸಾಗಿದ್ದನ್ನು ಸೂಕ್ಷ್ಮವಾಗಿ, ಸೂಕ್ತವಾಗಿ ತಿಳಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಕರಾವಳಿ ಲೇಖಕಿಯರ, ವಾಚಕಿಯರ ಸಂಘದ ಅಧ್ಯಕ್ಷರಾದ ವಿಜಯಲಕ್ಷ್ಮಿ ಭಟ್ ಯು‌ ಅವರು ನಮ್ಮ ಸಹಯೋಗದಲ್ಲಿ ನಡೆದ ಒಂದು ವಿಭಿನ್ನ ಅತ್ಯುತ್ತಮ ಕಾರ್ಯಕ್ರಮ ಇದು ಎಂದು ಅರುಹಿದರು.

ಜ್ಯೋತಿ ಚೇಳ್ಯಾರು ಅವರು ಎಲ್ಲರನ್ನೂ ಸ್ವಾಗತಿಸಿದರು ಹಾಗೂ ಪ್ರಶಸ್ತಿ ಪಡೆದ ಅನಿತಾ ಅವರ ಸನ್ಮಾನ ಪತ್ರವನ್ನು ಓದಿದರು.

ಚಂದ್ರಕಲಾ ನಂದಾವರ, ವಾಮನ ನಂದಾವರ, ರವಿ ಪುತ್ತೂರ, ದಿನೇಶ್ ಮೂಲ್ಕಿ, ಮಹೇಶ್, ಪ್ರವೀಣ್ ಶೆಟ್ಟಿ, ಎಡ್ವರ್ಡ್ ಸಾರಂಗ, ರಿಯಾನಾ ಡಿಕೂನ, ರಮಾನಾಥ‌ ಕೋಟೆಕಾರ್ ಎಂದು ಸಮಾರಂಭದಲ್ಲಿ ಹಲವಾರು ಖ್ಯಾತ ನಾಮರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *