Header Ads
Breaking News

ಆಲೂರು-ಹರ್ಕೂರು ಕೊರೋನಾ ತಡೆಗೆ ಸ್ವಯಂಪ್ರೇರಿತ ಬಂದ್!

ಕುಂದಾಪುರ: ಗ್ರಾಮೀಣ ಭಾಗಗಳಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸಂಖ್ಯೆ ಹೆಚ್ಚುತ್ತಿರುವ ಆತಂಕಕಾರಿ ವರದಿಯ ಬೆನ್ನಲ್ಲೇ ತಮ್ಮ ಗ್ರಾಮವನ್ನು ಕೊರೋನಾ ಮುಕ್ತ ಗ್ರಾಮವನ್ನಾಗಿಸುವ ನಿಟ್ಟಿನಲ್ಲಿ ಪಣ ತೊಟ್ಟಿರುವ ಇಲ್ಲಿನ ಆಲೂರು ಗ್ರಾಮ ಪಂಚಾಯಿತಿ ಸ್ವಯಂಪ್ರೇರಿತ ಲಾಕ್‍ಡೌನ್‍ಗೆ ನಿರ್ಣಯ ಕೈಗೊಂಡು ಅದನ್ನು ಕಾರ್ಯರೂಪಕ್ಕೆ ತಂದಿದೆ.

ವಾರದ ಏಳು ದಿನಗಳಲ್ಲಿ ಸೋಮವಾರ, ಮಂಗಳವಾರ, ಬುಧವಾರ ಸರ್ಕಾರದ ಮಾರ್ಗಸೂಚಿಯಂತೆ ಬೆಳಗ್ಗಿನ ಸಮಯದಲ್ಲಿ ದಿನಸಿ ಹಾಗೂ ಅಗತ್ಯ ವಸ್ತುಗಳ ಖರೀದಿಗೆ ಅವಕಾaಶ ಮಾಡಿಕೊಟ್ಟಿದ್ದು, ಉಳಿದಂತೆ ನಾಲ್ಕು ದಿನಗಳನ್ನೂ ಸಂಪೂರ್ಣ ಲಾಕ್‍ಡೌನ್‍ಗೆ ಮುಂದಾಗಿದೆ. ಕಳೆದ ಕೆಲ ದಿನಗಳಿಂದ ಆಲೂರು ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಕೊರೋನಾ ಪಾಸಿಟಿವ್ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡ ಹಿನ್ನೆಲೆ ತುರ್ತು ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಜನಪ್ರತಿನಿಧಿಗಳು, ಉದ್ಯಮಿಗಳು, ವರ್ತಕರು, ಸಾರ್ವಜನಿಕರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದು, ಕೊರೋನಾ ತಡೆಗಾಗಿ ಸ್ವಯಂಪ್ರೇರಿತ ಲಾಕ್‍ಡೌನ್ ಮಾಡುವುದು ಒಳಿತು ಎನ್ನುವ ಒಮ್ಮತದ ಅಭಿಪ್ರಾಯಗಳು ಕೇಳಿಬಂದ ಹಿನ್ನೆಲೆಯಲ್ಲಿ ಗ್ರಾಮಪಂಚಾಯಿತಿ ಸ್ವಯಂಪ್ರೇರಿತ ಲಾಕ್‍ಡೌನ್‍ಗೆ ಮುಂದಾಗಿದೆ.

ಪಂಚಾಯಿತಿ ನಿರ್ಣಯದಂತೆ ಗುರುವಾರದಿಂದಲೇ ಸ್ವಯಂಪ್ರೇರಿತ ಬಂದ್ ನಡೆಸಬೇಕಿತ್ತು. ಆದರೆ ಸತತ ನಾಲ್ಕು ದಿನಗಳ ಕಾಲ ಸಂಪೂರ್ಣ ಲಾಕ್‍ಡೌನ್ ನಡೆಸುವುದರಿಂದ ಜನರು ಅಗತ್ಯ ವಸ್ತುಗಳನ್ನು ಖರೀದಿಸಲು ಸಮಯ ಕೇಳಿಕೊಂಡಿದ್ದರಿಂದ ಒಂದು ದಿನದ ಬಳಿಕ ಶುಕ್ರವಾರದಿಂದ ಲಾಕ್‍ಡೌನ್ ಜಾರಿಗೊಳಿಸಲಾಗಿದೆ. ಗುರುವಾರವೇ ಜನರೆಲ್ಲರೂ ನಾಲ್ಕು ದಿನಗಳಿಗೆ ಬೇಕಾಗುವಷ್ಟು ಅಗತ್ಯ ವಸ್ತುಗಳನ್ನು ಖರೀದಿಸಿ ಲಾಕ್‍ಡೌನ್‍ಗೆ ತಯಾರಿ ನಡೆಸಿಕೊಂಡಿದ್ದರು. ಅಂತೆಯೇ ಶುಕ್ರವಾರ ಯಾರೂ ಪೇಟೆಗಳಿಗೆ ಬಾರದೆ ಮನೆಯಲ್ಲಿಯೇ ಲಾಕ್ ಆಗಿ ಸ್ವಯಂಪ್ರೇರಿತ ಬಂದ್‍ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ವೈದ್ಯಕೀಯ ಸೇವೆ, ಮೆಡಿಕಲ್ ಎಂದಿನಂತೆ ತೆರೆದಿದೆ.

Related posts

Leave a Reply

Your email address will not be published. Required fields are marked *