Header Ads
Breaking News

ಉಳ್ಳಾಲ ಕೋಡಿ ಸಮುದ್ರ ತೀರದಲ್ಲಿ ದಡಕ್ಕೆ ಅಪ್ಪಳಿಸಿದ ಮೀನುಗಾರಿಕಾ ಬೋಟ್: 10 ಮಂದಿಯ ರಕ್ಷಣೆ

ಉಳ್ಳಾಲ: ದಡಕ್ಕೆ ಮೀನುಗಾರಿಕಾ ಬೋಟ್ ಅಪ್ಪಳಿಸಿರುವ ಘಟನೆ ಉಳ್ಳಾಲದ ಕೋಡಿ ಸಮುದ್ರ ತೀರದಲ್ಲಿ ಭಾನುವಾರ ತಡರಾತ್ರಿ 1.30 ಗಂಟೆಗೆ ನಡೆದಿದೆ. ಸಮುದ್ರ ಮಧ್ಯೆ ಮೀನುಗಾರಿಕೆಗೆಂದು (ಕೊಳಾಯಿ )ನಿಲ್ಲಿಸಿದ್ದ ಸಂದರ್ಭ ಹಗ್ಗ ತುಂಡಾಗಿ ದಡಕ್ಕೆ ಅಪ್ಪಳಿಸಿದೆ ಎಂದು ಬೋಟ್ ಮಾಲೀಕರು ತಿಳಿಸಿದ್ದಾರೆ.

 

ತಮಿಳು ಮೂಲದ ಅನೀಸ್, ಸೂಸರಾಜ್, ಸಲೀಂ, ಮೊಯ್ದೀನ್, ರಾಜ್, ಜಾಜ್೯ ,ರಾಜೀವ್ ಗಾಂಧಿ, ತಂಗಾರ್, ಬನ್ನಾನ್ ರಕ್ಷಣೆಗೊಳಗಾದವರು. ಬೋಳಾರದ ಫಾರುಕ್ ಮತ್ತು ಉಳ್ಳಾಲ ಮುಕ್ಕಚ್ಚೇರಿಯ ಅಶ್ರಫ್ ಹೆಚ್. ಎಂಬವರಿಗೆ ಸೇರಿದ ‘ಅಝ್ನಾನ್’ ಹೆಸರಿನ ಮೀನುಗಾರಿಕಾ ಬೋಟ್ ದಡಕ್ಕೆ ಅಪ್ಪಳಿಸಿದೆ. ಶನಿವಾರ ರಾತ್ರಿ 10 ಗಂಟೆ ವೇಳೆಗೆ 10 ಜನ ಮೀನುಗಾರರಿದ್ದ ಬೋಟ್ ಆಳಸಮುದ್ರ ಮೀನುಗಾರಿಕೆಗೆ ತೆರಳಿತ್ತು. ಸಮುದ್ರದ ಮಧ್ಯೆ ಬೋಟನ್ನು ಕೊಳಾಯಿ ಹಾಕಿ ನಿಲ್ಲಿಸಲಾಗಿತ್ತು. ಈ ವೇಳೆ ಜೋರಾಗಿ ಬೀಸಿದ ಗಾಳಿಗೆ ಹಗ್ಗ ತುಂಡಾಗಿ ಉಳ್ಳಾಲ ಕೋಡಿ ಸಮುದ್ರ ತೀರದತ್ತ ಧಾವಿಸಿದ ಬೋಟ್ ದಡಕ್ಕೆ ಅಪ್ಪಳಿಸಿದೆ. ಸ್ಥಳೀಯ ಮನೆಮಂದಿಗೆ ಸಿಡಿಲು ಬಡಿದಂತಹ ಸದ್ದು ಕೇಳಿ ಹೊರನೋಡಿದಾಗ ಮೀನುಗಾರಿಕಾ ಬೋಟ್ ಕಡಲ್ಕೊರೆತ ತಡೆಗೆ ಹಾಕಲಾದ ಬಂಡೆಗಳಿಗೆ ಅಪ್ಪಳಿಸಿ ನಿಂತಿದೆ. ಬೋಟಿನಲ್ಲಿದ್ದ 10 ಮಂದಿ ಕಾರ್ಮಿಕರು ಹೊರಗೆ ಜಿಗಿದು ರಕ್ಷಣೆಗೊಳಗಾಗಿದ್ದು, ಈ ಪೈಕಿ ತೀವ್ರ ಅಸ್ವಸ್ಥನಾಗಿದ್ದರಿಂದಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕಾಗಮಿಸಿದ ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬೋಟ್ ಮೇಲೆತ್ತುವ ಕಾರ್ಯಾಚರಣೆ ವಿಫಲ:

ಬೆಳಗ್ಗಿನಿಂದ ಉಳ್ಳಾಲ ಕೋಡಿಯಲ್ಲಿ ಮಂಗಳೂರಿನಿಂದ ಬಂದ ಇತರೆ ಎರಡು ಮೀನುಗಾರಿಕಾ ಬೋಟಿನ ಮೂಲಕ ಅವಘಢಕ್ಕೀಡಾಗಿರುವ ಬೋಟನ್ನು ಮೇಲೆತ್ತುವ ಕಾರ್ಯಾಚರಣೆ ಮುಂದುವರಿದಿದೆ. ಹಲವು ಬಾರಿ ರೋಪ್ ಹಾಕಿ ಬೋಟನ್ನು ಎಳೆಯುವ ಪ್ರಯತ್ನ ಮಾಡಿದರೂ ರೋಪ್ ತುಂಡಾಗಿ ಕಾರ್ಯಾಚರಣೆ ಮಧ್ಯಾಹ್ನದವರೆಗೂ ವಿಫಲವಾಗಿದೆ. ಬೋಟಿನೊಳಗಡೆ ಹಲವು ಲೀಟರ್ ಡಿಸೀಲ್ ಇದ್ದು, ಮೀನಿನ ಟ್ರೇಗಳು ಮತ್ತು ಬಲೆ ಸಮುದ್ರಪಾಲಾಗಿವೆ. ದಡದಲ್ಲಿರುವ ಕಲ್ಲುಗಳಿಗೆ ಬೋಟ್ ಅಪ್ಪಳಿಸುತ್ತಿರುವುದರಿಂದ ಬೋಟಿಗೆ ಹಾನಿಯೂ ಆಗುತ್ತಿದೆ. ರೂ. 1.20 ಕೋಟಿ ರೂ ವೆಚ್ಚದ ಬೋಟ್ ಇದಾಗಿದೆ. ವಾರದ ಹಿಂದಷ್ಟೇ ಮೀನುಗಾರಿಕೆಗೆಂದು ತೆರಳಿದ್ದ ಬೋಟಿಗೆ ಹೆಚ್ಚಿನ ಪ್ರಮಾಣದಲ್ಲಿ ಮೀನು ದೊರೆಯದೆ ರು.1.5 ಲಕ್ಷ ನಷ್ಟ ಉಂಟಾಗಿತ್ತು. ಈ ಬಾರಿ ‘ ಅಂಜಲ್ ಮೀನು’ ಹೆಚ್ಚಾಗಿ ಬಲೆಗೆ ಬೀಳುತ್ತಿದೆ ಎಂದು ಮೀನುಗಾರರು ಹೇಳಿದ ಪರಿಣಾಮ ಹಿನ್ನೆಲೆಯಲ್ಲಿ ಮತ್ತೆ ಬಂಡವಾಳ ಹಾಕಿ ಬೋಟನ್ನು ಆಳಸಮುದ್ರ ಮೀನುಗಾರಿಕೆಗೆ ಕಳುಹಿಸಲಾಗಿತ್ತು.

ಸ್ಥಳಕ್ಕೆ ಶಾಸಕ ಖಾದರ್ ಭೇಟಿ :
ಬೋಟನ್ನು ತೆಗೆಯಲು ಸಮಸ್ಯೆಯಾಗಿದೆ. ಕ್ರೇನ್ ಮೂಲಕ ತೆಗೆಯುವ ಕಾರ್ಯ ಆಗಬೇಕಿದೆ ಕ್ರೇನ್ ಎನ್ ಎಂಪಿಟಿಯಲ್ಲಿ ಮಾತ್ರ ಇದ್ದು, ಅವರ ಗಮನಕ್ಕೆ ತರುವ ಪ್ರಯತ್ನ ಮಾಡಿದ್ದೇನೆ. ಬಂದರು ಮತ್ತು ಮೀನುಗಾರಿಕಾ ಇಲಾಖೆ ಯವರು ಬೋಟ್ ತೆಗೆಯುವ ಕಾರ್ಯಾಚರಣೆ ನಡೆಸಿ ಮತ್ತೆ ಬೋಟಿನವರು ಮೀನುಗಾರಿಕಾ ನಡೆಸಲು ಅವಕಾಶ ಕಲ್ಪಿಸಬೇಕಿದೆ ಎಂದು ಶಾಸಕ ಯು.ಟಿ ಖಾದರ್ ತಿಳಿಸಿದರು.

 

Related posts

Leave a Reply

Your email address will not be published. Required fields are marked *