ಕೆಎಟಿ ತೀರ್ಪು ಹಿನ್ನೆಲೆ: ಮುಂಬಡ್ತಿ ಶಿಕ್ಷಕರ ಹಿತ ಕಾಪಾಡಲು ಆಗ್ರಹ: ಸಚಿವರು, ಶಾಸಕರಿಗೆ ಶಿಕ್ಷಕರ ಸಂಘದಿಂದ ಮನವಿ

ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ನಡುವಿನ ಮುಂಬಡ್ತಿ ಗೊಂದಲ ಹೊಸ ತಿರುವು ಪಡೆದುಕೊಂಡಿದೆ. ಈಗಾಗಲೇ ಮುಂಬಡ್ತಿ ಪಡೆದಿರುವ ಗ್ರೇಡ್ 2 ಪ್ರೌಢ ಶಾಲಾ ಶಿಕ್ಷಕರ ಹಿತವನ್ನು ಕಾಪಾಡಬೇಕು ಎಂಬ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಬಡ್ತಿ ಸರಕಾರಿ ಪ್ರೌಢಶಾಲಾ ಶಿಕ್ಷಕರ ಸಂಘ ಅಭಿಯಾನ ಆರಂಭಿಸಿದೆ.


ಶಿಕ್ಷಕರ ಹಿಂಭಡ್ತಿ ಆದೇಶವನ್ನು ಮರು ಪರಿಶೀಲಿಸುವಂತೆ ಸರ್ಕಾರ ಮತ್ತು ಇಲಾಖೆಯ ಮೇಲೆ ಒತ್ತಡ ಹೇರುವಂತೆ ಸಂಘ ಮುಂದಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಉಸ್ತುವಾರಿ ಸಚಿವರು ಮತ್ತು ಶಾಸಕರನ್ನು ಭೇಟಿ ಮಾಡಿ ಈ ಬಗ್ಗೆ ಸಂತ್ರಸ್ತ ಶಿಕ್ಷಕರ ಅಹವಾಲವನ್ನು ಮಂಡಿಸಲಾಯಿತು.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮಂಗಳೂರು ದಕ್ಷಿಣ ಶಾಸಕ ಡಿ. ವೇದವ್ಯಾಸ ಕಾಮತ್, ಮಂಗಳೂರು ಶಾಸಕ ಹಾಗೂ ಮಾಜಿ ಸಚಿವ ಯು.ಟಿ. ಖಾದರ್ ಅವರಿಗೆ ಲಿಖಿತ ಮನವಿ ಸಲ್ಲಿಸಿ ಸಮಸ್ಯೆಯನ್ನು ಮನವರಿಕೆ ಮಾಡಿಕೊಡಲಾಯಿತು.ಸಂಘದ ಜಿಲ್ಲಾಧ್ಯಕ್ಷೆ ಶ್ರೀಮತಿ ಶೆರ್ಲಿ ಸುಮಾಲಿನಿ ನೇತೃತ್ವದಲ್ಲಿ ಸಚಿವರು ಮತ್ತು ಶಾಸಕರಿಗೆ ಮನವಿ ಸಲ್ಲಿಸಲಾಯಿತು.


ಉಪಾಧ್ಯಕ್ಷರಾದ ಶ್ರೀಮತಿ ಪ್ರತಿಭಾ, ಜಿಲ್ಲಾ ಕಾರ್ಯದರ್ಶಿ ಶ್ರೀ ಪ್ರತೀಪ್ ಹಾಗು ಮಂಗಳೂರು ತಾಲೂಕು ಸಂಘದ ಅಧ್ಯಕ್ಷ ಶ್ರೀ ಪ್ರೇಮನಾಥ ಮರ್ಣೆ, ಸಂಘಟನಾ ಕಾರ್ಯದರ್ಶಿ ಶ್ರೀ ಗಣೇಶ್ ಹಾಗೂ ಇತರ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಇದೇ ವೇಳೆ, ಬಂದರು, ಮೀನುಗಾರಿಕೆ ಮತ್ತು ಒಳನಾಡು ಸಾರಿಗೆ ಸಚಿವರಾದ ಎಸ್.ಅಂಗಾರ ಅವರಿಗೂ ಸುಳ್ಯದಲ್ಲಿ ಮನವಿ ಸಲ್ಲಿಸಲಾಯಿತು. ಸುಳ್ಯ ತಾಲೂಕು ಬಡ್ತಿ ಶಿಕ್ಷಕರ ಸಂಘದ ಅಧ್ಯಕ್ಷರಾದ ನಾರಾಯಣ.ಬಿ, ಪದಾಧಿಕಾರಿಗಳಾದ ಉನ್ನಿಕೃಷ್ಣನ್ ಹಾಗೂ ಹಿಂಬಡ್ತಿ ಎದುರಿಸುತ್ತಿರುವ ಶಿಕ್ಷಕರು ಸಚಿವ ಅಂಗಾರ ಅವರಿಗೆ ಮನವಿ ಅರ್ಪಿಸಿದರು.ಪುತ್ತೂರು ತಾಲೂಕು ಬಡ್ತಿ ಶಿಕ್ಷಕರ ಸಂಘದಿಂದ ಶಾಸಕ ಸಂಜೀವ ಮಠಂದೂರು ಅವರಿಗೆ ಮನವಿ ಸಲ್ಲಿಸಲಾಯಿತು.ಕರ್ನಾಟಕ ಆಡಳಿತ ನ್ಯಾಯ ಮಂಡಳಿಯು ಕಳೆದ ಮೇ12ರಂದು ಮಹತ್ವದ ತೀರ್ಪು ನೀಡಿದ್ದು, 6ರಿಂದ 8 ತರಗತಿ ವರೆಗೆ ಬೋಧಿಸಲು ನೇಮಕಗೊಂಡ ಶಿಕ್ಷಕರು ಮಾತ್ರ ಪ್ರೌಢ ಶಾಲಾ ಶಿಕ್ಷಕರು ಗ್ರೇಡ್2 ಹುದ್ದೆಯನ್ನು ಹೊಂದಲು ಅರ್ಹರು ಮತ್ತು ಈ ಹಿಂದೆ ನೀಡಿರುವ ಎಲ್ಲ ಭಡ್ತಿಗಳನ್ನು ಹಿಂಪಡೆಯಬೇಕು ಎಂದು ಕೆಎಟಿ ತೀರ್ಪಿನಲ್ಲಿ ಹೇಳಿತ್ತು. ಈ ಬಗ್ಗೆ ಬಡ್ತಿ ಶಿಕ್ಷಕರ ಸಂಘ ಮೇಲ್ಮನವಿ ಸಲ್ಲಿಸಲು ಮುಂದಾಗಿದ್ದು, ಸರ್ಕಾರದ ಮೇಲೆ ಒತ್ತಡ ಹೇರಲು ಈ ಮನವಿ ಸಲ್ಲಿಸಲಾಗುತ್ತಿದೆ.

 

Related Posts

Leave a Reply

Your email address will not be published.