Header Ads
Breaking News

ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಗೌರವಾಧ್ಯಕ್ಷ ಗೋಕುಲ್‍ದಾಸ್ ನಿಧನ

ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಗೌರವಾಧ್ಯಕ್ಷ, ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಪಳ್ಳಿ ಗೋಕುಲ್‍ದಾಸ್ ಅವರು ಮಂಗಳವಾರ ನಿಧನರಾದರು . 90 ವರ್ಷ ವಯಸ್ಸಿನ ಅವರು ಕಳೆದ ಕೆಲ ದಿನಗಳಿಂದ ಬಹು ಅಂಗಾಂಗ ವೈಫಲ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಕರಾವಳಿ ಜಿಲ್ಲೆಯ ಮೂಲ ನಿವಾಸಿಗಳೆಂದು ಗುರುತಿಸಲ್ಪಟ್ಟಿರುವ ಕೊರಗ ಸಮುದಾಯದ ಭೂಮಿಗಾಗಿನ ಹೋರಾಟದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದ ಪಿ. ಗೋಕುಲ್‍ದಾಸ್ , ಕೊರಗ ಸಮುದಾಯಕ್ಕೆ ಆಹಾರ ಒದಗಿಸುವ ಕುರಿತಾದ ಹೋರಾಟದ ನೇತೃತ್ವವನ್ನೂ ವಹಿಸಿದ್ದವರು.

ಮೂಲತಃ ಕಾರ್ಕಳ ತಾಲೂಕಿನ ಪಳ್ಳಿ ಗ್ರಾಮದ ಗೋಕುಲದಾಸರು ಕೊರಗ ಸಮುದಾಯದ ಮೊಟ್ಟ ಮೊದಲ ಪಧವೀದರರಾಗಿದ್ದರು. ಕೊರಗ ಸಮುದಾಯಕ್ಕೆ ಸ್ಫೂರ್ತಿಯ ಚಿಲುಮೆಯಾಗಿದ್ದರು. ಹುಟ್ಟು ಹೋರಾಟಗಾರ, ಉತ್ತಮ ಸಂಘಟಕ ಹಾಗೂ ಒಳ್ಳೆಯ ಮಾತುಗಾರರಾಗಿದ್ದರು. ಇವೆಲ್ಲವಕ್ಕೂ ಕಲಶವಿಟ್ಟಂತೆ ಅವರೊಬ್ಬ ಮಹಾ ಮಾನವತವಾದಿಯಾಗಿದ್ದರು.Gokuldas

ಅಂಚೆ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದ ಗೋಕುಲದಾಸರು ನಿವೃತ್ತಿ ಜೀವನವನ್ನು ಮಂಗಳೂರಿನ ಚಿಲಿಂಬಿಯ ತಮ್ಮ ಸ್ವಗೃಹದಲ್ಲಿ ಕಳೆಯುತ್ತಿದ್ದರು. ತಮ್ಮ ಇಳಿ ವಯಸ್ಸಿನಲ್ಲಿಯೂ ಕೊರಗ ಸಮುದಾಯದ ಸಂಘಟನೆ ಮತ್ತು ಅಭಿವೃದ್ಧಿಗಾಗಿ ದುಡಿಯುತ್ತಿದ್ದರು. ಅವಿಭಜಿತ ದ.ಕ. ಜಿಲ್ಲೆಯಲ್ಲಿ ಕೊರಗರ ಯಾವುದೇ ಕಾರ್ಯಕ್ರಮವಿದ್ದರೂ ಅದಕ್ಕೆ ತಪ್ಪದೇ ಹಾಜರಾಗುತಿದ್ದರು. ‘ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ’ದ ಗೌರವಾಧ್ಯಕ್ಷರೂ ಆಗಿದ್ದರು.

ಕಾರ್ಕಳ ತಾಲೂಕಿನ ಪಳ್ಳಿ ಗ್ರಾಮದ ಧರ್ಮೆಟ್ಟು ಎಂಬಲ್ಲಿ ತುಕ್ರ ಕೊರಗ ಹಾಗೂ ತೋಮು ದಂಪತಿಯ ಪುತ್ರನಾಗಿ 1930ರಲ್ಲಿ ಜನಿಸಿದ್ದರು. ಪಳ್ಳಿಯಲ್ಲೇ ಪ್ರಾಥಮಿಕ, ಪ್ರೌಢ ಶಿಕ್ಷಣದ ಬಳಿಕ ಮಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ ಅವರು ಪದವಿ ಶಿಕ್ಷಣ ಪಡೆದರು. 1958ರಲ್ಲಿ ಅಂಚೆ ಇಲಾಖೆಯ ನೌಕರನಾಗಿ ನಿಯುಕ್ತಿಗೊಂಡು ತಿರುಚಿನಾಪಳ್ಳಿ , ಮಣಪಾರೈ, ಕಾಸರಗೋಡು, ಶ್ರೀರಾಂಪೇಟೆ, ಮೈಸೂರು, ಬೆಂಗಳೂರು, ಮಂಗಳೂರು ಮೊದಲಾದೆಡೆ ಸೇವೆ ಸಲ್ಲಿಸಿ 1994ರಲ್ಲಿ ಬೆಳಗಾವಿಯಲ್ಲಿ ನಿವೃತ್ತರಾಗಿದ್ದರು.

ಮೃತ ಗೋಕುಲದಾಸರ ಅಂತ್ಯಕ್ರಿಯೆಯನ್ನು ಮಂಗಳೂರು ಬೋಳೂರು ಸ್ಮಶಾನದಲ್ಲಿ ಬುಧವಾರ ಸಂಜೆ ನೆರವೇರಿಸಲಾಯಿತು.

 

Related posts

Leave a Reply

Your email address will not be published. Required fields are marked *