ಖಾಸಗಿ ಬಸ್ಸುಗಳ ಪ್ರಯಾಣ ದರ ವಿಪರೀತ ಏರಿಕೆಯನ್ನು ಖಂಡಿಸಿ ಜಿಲ್ಲಾಡಳಿತದ ಏಕಪಕ್ಷೀಯ ನಿರ್ಧಾರವನ್ನು ವಿರೋಧಿಸಿ ಐಕ್ಯ ಹೋರಾಟಕ್ಕೆ ನಿರ್ಧಾರ

ಖಾಸಗಿ ಬಸ್ಸುಗಳ ಪ್ರಯಾಣ ದರದಲ್ಲಿ ವಿಪರೀತ ಏರಿಕೆಯನ್ನು ಹಾಗೂ ದ.ಕ. ಜಿಲ್ಲಾಡಳಿತದ ಏಕಪಕ್ಷೀಯ ನಿರ್ಧಾರವನ್ನು ಕಾಂಗ್ರೆಸ್, ಸಿಪಿಐ(ಎಂ), ಸಿಪಿಐ, ಜಾತ್ಯಾತೀತ ಜನತಾದಳ ಸೇರಿದಂತೆ ವಿದ್ಯಾರ್ಥಿ ಯುವಜನ ಮಹಿಳಾ ದಲಿತ ಸಂಘಟನೆಗಳ ಒಕ್ಕೂಟವು ಪ್ರಬಲವಾಗಿ ಖಂಡಿಸಿದ್ದು, ಸದ್ಯಕ್ಕೆ ದರ ಏರಿಕೆಯನ್ನು ತಡೆಹಿಡಿದು ಕೂಡಲೇ ಸಾರಿಗೆ ಪ್ರಾಧಿಕಾರದ ಸಭೆಯನ್ನು ಕರೆಯಬೇಕೆಂದು ಒತ್ತಾಯಿಸಿದೆ. ಇಲ್ಲದಿದ್ದಲ್ಲಿ ದ.ಕ. ಜಿಲ್ಲೆಯಾದ್ಯಂತ ವ್ಯಾಪಕ ಪ್ರತಿಭಟನೆ, ರಸ್ತೆ ತಡೆ ಚಳುವಳಿ, ಕರಪತ್ರ ಹಂಚಿಕೆ, ಮನೆ ಮನೆ ಪ್ರಚಾರ ಸೇರಿದಂತೆ ಐಕ್ಯ ಹೋರಾಟಗಳನ್ನು ನಡೆಸಲು ನಿರ್ಧರಿಸಲಾಗಿದೆ.

ಕನ್ನಡ ಜಿಲ್ಲೆಯಲ್ಲಿ ಸಂಚರಿಸುವ ಖಾಸಗಿ ಬಸ್ಸುಗಳ ಪ್ರಯಾಣ ದರವನ್ನು ಶೇಕಡಾ 25%ಕ್ಕಿಂತಲೂ ಜಾಸ್ತಿ ಮಾಡಲು ಅವಕಾಶ ನೀಡಿರುವುದು ತೀವ್ರ ಆಕ್ಷೇಪಾರ್ಹವಾಗಿದೆ. ಕಳೆದ ವರ್ಷ ಕೂಡಾ ಬಸ್ಸು ಮಾಲಕರು ಏಕಪಕ್ಷೀಯವಾಗಿ ಈ ಮೊದಲು ನಿರ್ಧರಿಸಲಾದ ದರದ ಮೇಲೆ 25% ಹೆಚ್ಚಳ ಮಾಡಿದ್ದು, ಈ ಬಾರಿ ಜಿಲ್ಲಾಡಳಿತವೇ ಮತ್ತೇ 25% ಹೆಚ್ಚಳಕ್ಕೆ ನೋಟಿಫಿಕೇಶ್ ಮಾಡಿರುವುದರಿಂದ ಬಡ, ಕೂಲಿ ಕಾರ್ಮಿಕರು ಹಾಗೂ ಜನಸಾಮಾನ್ಯರಿಗೆ ತೀವ್ರ ತೊಂದರೆಯಾಗಿದೆ. ದಿನದ ಸಂಪಾದನೆಯ 25% ಭಾಗವನ್ನು ಪ್ರಯಾಣದರಕ್ಕೆ ಖರ್ಚು ಮಾಡಬೇಕಾದ ಅನಿವರ‍್ಯತೆಯನ್ನು ಜಿಲ್ಲಾಡಳಿತ ನಿರ್ಮಿಸಿರುವುದು ತೀವ್ರ ಖಂಡನೀಯ.
ಜಿಲ್ಲೆಯಲ್ಲಿ ಸಾಮಾನ್ಯವಾಗಿ ಪ್ರತೀ ಎರಡು ವರ್ಷಕ್ಕೆ ಒಂದು ಬಾರಿ ೭%ದಿಂದ 12.5%ದ ವರೆಗೆ ಹೆಚ್ಚಳಕ್ಕೆ ಅವಕಶವನ್ನು ನೀಡಲಾಗುತ್ತಿತ್ತು. ಈ ರೀತಿ ಹೆಚ್ಚಳ ಮಾಡುವಾಗ ಜಿಲ್ಲಾಧಿಕಾರಿಯವರು ಸಂಘ, ಸಂಸ್ಥೆಗಳು, ರಾಜಕೀಯ ಪಕ್ಷಗಳು ಹಾಗೂ ಬಸ್ಸು ಮಾಲಕರ ಸಭೆಗಳನ್ನು ಕರೆದು ಮುಕ್ತ ಚರ್ಚೆ ನಡೆದು ಸರ್ವ ಸಮ್ಮತದ ದರವನ್ನು ನಿಗದಿ ಮಾಡಲಾಗುತ್ತಿತ್ತು. ಈ ರೀತಿ ಮಾಡುವಾಗ ಮೊದಲಿನ ಎರಡು ಸ್ಟೇಜ್‌ಗಳಲ್ಲಿ ಕೇವಲ 7% ಮಾತ್ರ ಅವಕಾಶ ನೀಡಲಾಗುತ್ತಿತ್ತು. ಆ ರೀತಿ ನಿರ್ಧರಿತವಾಗುವಾಗ ಚಿಲ್ಲರೆ ಪೈಸೆಯನ್ನು ಕೆಳಗಿನ ರೂಪಾಯಿಗೆ ಹೊಂದಾಣಿಕೆ ಮಾಡಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲಾಗುತ್ತಿತ್ತು. ಆದರೆ ಈ ಬಾರಿ ಎಲ್ಲಾ ವಿಧದಲ್ಲೂ ಪ್ರಯಾಣಿಕರ ಜೇಬಿಗೆ ಕತ್ತರಿ ಪ್ರಯೋಗ ಮಾಡಲಾಗಿದೆ. ಈಗಾಗಲೇ ಕಳೆದ ಎರಡು ವರ್ಷಗಳಿಂದ ಕೊರೋನಾದಿಂದ ಉದ್ಯೋಗ ಕಡಿತ, ಕೆಲಸವಿಲ್ಲದೆ ಒಂದು ಹೊತ್ತಿನ ಊಟಕ್ಕಾಗಿ ಪರಿತಪಿಸುವಾಗ ಜಿಲ್ಲಾಡಳಿತಕ್ಕೆ ಕನಿಷ್ಟ ಮಾನವೀಯ ಸ್ಪರ್ಶ ಇಲ್ಲದಿರುವುದು ಆಘಾತಕಾರಿಯಾದ ಘಟನೆಯಾಗಿದೆ.

ಈ ಸಂದರ್ಭ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶುಭೋದಯ ಆಳ್ವಾ, ನೀರಜ್ ಪಾಲ್, ಸಿಪಿಐ ಜಿಲ್ಲಾ ಕಾರ್ಯದರ್ಶಿ ವಿ.ಕುಕ್ಯಾನ್, ಸಿಪಿಐ ಜಿಲ್ಲಾ ಮುಖಂಡ ಹೆಚ್.ವಿ.ರಾವ್, ಜೆಡಿಎಸ್ ಮಹಿಳಾ ಮುಖಂಡೆ ಸುಮತಿ ಎಸ್.ಹೆಗ್ಡೆ, ಮಾಜಿ ಉಪ ಮೇಯರ್ ಮಹಮ್ಮದ್ ಕುಂಜತ್‌ಬೈಲ್ ಸೇರಿದಂತೆ ಮತ್ತಿತರ ಸದಸ್ಯರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.