ಧಾರ್ಮಿಕ ಆಚರಣೆಯ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯ: ಸಚಿವ ವಿ. ಸುನೀಲ್ ಕುಮಾರ್

ಕುಂದಾಪುರ: ಕೊರೋನಾ ಹರಡುವಿಕೆ ತಡೆಗಟ್ಟಲು ಕೇಂದ್ರ ಸರಕಾರವು ರಾಜ್ಯ ಸರಕಾರಕ್ಕೆ ಒಂದಷ್ಟು ಮಾರ್ಗಸೂಚಿಗಳನ್ನು ಕಳುಹಿಸಿದೆ. ಧಾರ್ಮಿಕ ಆಚರಣೆಯನ್ನು ನಡೆಸುವ ಬಗ್ಗೆ ಸರಕಾರಕ್ಕೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಆದರೆ ಆಚರಣೆಯ ಜತೆಗೆ ನಮ್ಮೆಲ್ಲರ ಆರೋಗ್ಯ ಕಾಪಾಡಿಕೊಳ್ಳುವ ಅನಿವಾರ್ಯತೆಯಿದೆ. ಈ ನಿಟ್ಟಿನಲ್ಲಿ ಆಚರಣೆಗಳು ಎಷ್ಟು ವೈಭವವಾಗಿ ನಡೆಯಬೇಕು ಎನ್ನುವುದನ್ನು ಅರಿತು, ಪ್ರಧಾನಿಯವರು ತಿಳಿಸಿದಂತೆ ನಾವೇ ಸ್ವತಃ ಸ್ವಯಂ ನಿಯಂತ್ರಣ ಮಾಡಿಕೊಳ್ಳಬೇಕು. ಸರಕಾರದ ಮೊದಲ ಆದ್ಯತೆ ಜನರ ಆರೋಗ್ಯ. ಸುತ್ತೋಲೆಯಂತೆ ಧಾರ್ಮಿಕ ಆಚರಣೆಗೆ ಚ್ಯುತಿಯಾಗದಂತೆ ಕಾರ್ಯಕ್ರಮ ಮಾಡಬೇಕು ಎಂದು ರಾಜ್ಯ ಇಂಧನ ಸಚಿವ ವಿ ಸುನೀಲ್ ಕುಮಾರ್ ಹೇಳಿದರು.ಅವರು ಸೋಮವಾರ ಹಟ್ಟಿಯಂಗಡಿಯ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.


ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನಮ್ಮ ಪಕ್ಷದ ಹಾಗೂ ರಾಜ್ಯದ ಸರ್ವಶ್ರೇಷ್ಠ ನಾಯಕರು. ಅವರು ಪಕ್ಷದ ಸಂಘಟನೆಗೋಸ್ಕರ ರಾಜ್ಯವ್ಯಾಪಿ ಪ್ರವಾಸ ಮಾಡುವುದರಲ್ಲಿ ತಪ್ಪೇನು. ಪಕ್ಷದ ಸಂಘಟನೆಯನ್ನು ಯಾರು ಬೇಕಾದರೂ ಮಾಡಬಹುದು. ಬಿಎಸ್‌ವೈ ಅವರು ಪಕ್ಷ ಸಂಘಟನೆಗಾಗಿ ರಾಜ್ಯ ಪ್ರವಾಸ ಮಾಡುವುದು ಸ್ವಾಗತಾರ್ಹ. ಸರಕಾರ ಹಾಗೂ ಪಕ್ಷಕ್ಕೆ ಅವರ ಸಲಹೆ ಅಗತ್ಯವಿದೆ ಎಂದು ಸಚಿವ ಸುನೀಲ್ ಕುಮಾರ್ ಹೇಳಿದರು.
ಕೊರೊನಾ ಸಂದರ್ಭದಲ್ಲಿ ಸರಕಾರದಿಂದ 20  ಸಾವಿರ ಕಲಾವಿದರಿಗೆ ಗೌರವಧನ ನೀಡಲಾಗಿತ್ತು. ಈ ಬಾರಿಯೂ ಸರಕಾರದ ಮುಂದೆ ಚಿಂತನೆಯಿದ್ದು, ಬೆಂಗಳೂರಿಗೆ ತೆರಳಿದ ಬಳಿಕ ಸಭೆ ನಡೆಸಿ, ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ, ವಿವರ ನೀಡಲಾಗುವುದು. ಯಕ್ಷಗಾನ ಅಕಾಡೆಮಿ, ಬಯಲಾಟ ಹೀಗೆ ಖಾಲಿಯಿರುವ ಎಲ್ಲ ಅಕಾಡೆಮಿಗಳಿಗೆ ಶೀಘ್ರ ಅಧ್ಯಕೆರ ನೇಮಕ ಮಾಡಲಾಗುವುದು ಎಂದ ಅವರು, ಎಲ್ಲ ಅಕಾಡೆಮಿಗಳಲ್ಲಿಯೂ ಹೊಸತನ ತರಲು ನಾನು ಯೋಜನೆ ಹಾಕಿಕೊಂಡಿದ್ದೇನೆ ಎಂದು ತಿಳಿಸಿದರು.

ಹಟ್ಟಿಯಂಗಡಿ ದೇವಸ್ಥಾನಕ್ಕೆ ಸಚಿವ ಸುನಿಲ್ ಭೇಟಿ
ಹಟ್ಟಿಯಂಗಡಿಯ ಪುರಾಣ ಪ್ರಸಿದ್ಧ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನಕ್ಕೆ ಸೋಮವಾರ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ಭೇಟಿ ನೀಡಿ, ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು.ದೇವಸ್ಥಾನಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿದ ಸಚಿವರು ರಂಗಪೂಜೆಯಲ್ಲಿ ಭಾಗಿಯಾದರು. ಇಲ್ಲಿಗೆ ಆಗಾಗ ಭೇಟಿ ನೀಡುವ ಸುನೀಲ್ ಕುಮಾರ್ ಅವರು, ಸಚಿವರಾಗುವ ಮುನ್ನ ಸಹ ಹಟ್ಟಿಯಂಗಡಿಯ ಶ್ರೀ ಸಿದ್ಧಿವಿನಾಯಕ ದೇವರ ದರ್ಶನವನ್ನು ಪಡೆದಿದ್ದರು.
ಸಚಿವರಿಗೆ ಸನ್ಮಾನ:
ಈ ಸಂದರ್ಭದಲ್ಲಿ ಇದೇ ಮೊದಲ ಬಾರಿಗೆ ಸಚಿವರಾಗಿ ಅಧಿಕಾರ ವಹಿಸಿಕೊಂಡ ಸುನಿಲ್ ಕುಮಾರ್ ಅವರನ್ನು ಹಟ್ಟಿಯಂಗಡಿ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದ ವತಿಯಿಂದ ಧರ್ಮದರ್ಶಿ ಬಾಲಚಂದ್ರ ಭಟ್ ಅವರು ಸನ್ಮಾನಿಸಿದರು. ಇದೇ ವೇಳೆ ದೇವಸ್ಥಾನದ ಪರವಾಗಿ ಧಾರ್ಮಿಕ ವಿಚಾರಗಳಿಗೆ ಸಂಬಂಧಿಸಿದ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಲಾಯಿತು.
ಲೈನ್‌ಮನ್‌ಗೆ ಗೌರವ
ಇಂಧನ ಸಚಿವರಾಗಿರುವ ಸುನಿಲ್ ಕುಮಾರ್ ಅವರು ತನಗೆ ಸನ್ಮಾನದ ಮೂಲಕ ಸಿಕ್ಕ ಶಾಲನ್ನು ಅಲ್ಲಿ ಉಪಸ್ಥಿತರಿದ್ದ ಮೆಸ್ಕಾಂನ ಹಿರಿಯ ಲೈನ್‌ಮನ್ ಪ್ರಸ್ತುತ ಹೆಮ್ಮಾಡಿ ಗ್ರಾ.ಪಂ ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಮಂಜುನಾಥ್ ಪೂಜಾರಿ ಅವರಿಗೆ ಹೊದಿಸಿ, ಅವರನ್ನು ಗೌರವಿಸಿದರು.
ಈ ಸಂದರ್ಭದಲ್ಲಿ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಅರ್ಚಕ ವೃಂದವರು, ಹಟ್ಟಿಯಂಗಡಿ ಗ್ರಾ.ಪಂ. ಅಧ್ಯಕ್ಷೆ ಅಮೃತಾ ಶೆಟ್ಟಿ, ಸದಸ್ಯ ಚಂದ್ರ ಮೊಗವೀರ, ತಾ.ಪಂ. ಮಾಜಿ ಸದಸ್ಯ ಕರಣ ಪೂಜಾರಿ, ಬಿಜೆಪಿ ಮುಖಂಡರಾದ ಪ್ರಭಾಕರ ಶೆಟ್ಟಿ, ಗುರುರಾಜ್ ಮೊದಲಾದವರು ಉಪಸ್ಥಿತರಿದ್ದರು.

 

Related Posts

Leave a Reply

Your email address will not be published.