Header Ads
Breaking News

ನಿಡ್ಡೋಡಿಯಲ್ಲಿ “ಸೀಫುಡ್” ಕಾರ್ಖಾನೆ ನಿರ್ಮಾಣ..?: ಪರಿಶೀಲನೆಗೆ ಬಂದ ಸಚಿವ, ಶಾಸಕರಿಗೆ ಘೆರಾವು

ಮೂಡುಬಿದಿರೆ: ಕಲ್ಲಮುಂಡ್ಕೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ನಿಡ್ಡೋಡಿ ಗ್ರಾಮದ ಕೊಳತ್ತಾರು ಪದವು ಸರಕಾರಿ ಜಾಗದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸರಕಾರದ ಬೃಹತ್ ಸೀಫುಡ್ ಕಾರ್ಖಾನೆಯ ಸ್ಥಳ ಪರಿಶೀಲನೆಗೆ ಬಂದ ಬಂದರು ಮತ್ತು ಮೀನುಗಾರಿಕೆ ಸಚಿವ ಅಂಗಾರ ಹಾಗೂ ಸ್ಥಳೀಯ ಶಾಸಕ ಉಮಾನಾಥ ಕೋಟ್ಯಾನ್ ವಿರುದ್ಧ ಸ್ಥಳೀಯರು ಪ್ರತಿಭಟನೆ ನಡೆಸಿ ಘೆರಾವು ಹಾಕಿ ಪ್ರತಿಭಟಿಸಿದ ಘಟನೆ ನಡೆದಿದೆ.


ಸ್ಥಳೀಯರಿಗೆ ಯಾವುದೇ ಮಾಹಿತಿಯನ್ನು ಇಲ್ಲದೆ ಹಾಗೂ ಕೈಗಾರಿಕೆಯ ಸಾಧಕ ಬಾಧಕಗಳ ಕುರಿತು ನಮಗೆ ಸ್ಪಷ್ಟ ಮಾಹಿತಿ ನೀಡದೆ, ನಮ್ಮ ಅಭಿಪ್ರಾಯವನ್ನು ಪಡೆಯದೆ , ಸ್ಥಳ ಪರಿಶಿಲನೆಗೆ ಬಂದಿದ್ದೀರಿ ಎಂದು ಸ್ಥಳೀಯರು ಸಚಿವ ಮತ್ತು ಶಾಸಕರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.


ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಉಮಾನಾಥ ಕೋಟ್ಯಾನ್ ಅವರು ಇದು ರಾಜ್ಯ ಸರ್ಕಾರದ ಬೃಹತ್ ಕೈಗಾರಿಕೆಯಾಗಿದ್ದು ಇದನ್ನು ತನ್ನ ಕ್ಷೇತ್ರದಲ್ಲಿ ಸ್ಥಾಪಿಸಲು ಸರಕಾರ ಅನುಮತಿ ನೀಡಿದೆ. ಇದು ಸುಮಾರು 50 ಎಕ್ರೆ ಸರಕಾರಿ ಜಾಗದಲ್ಲಿ ನಿರ್ಮಾಣವಾಗಲಿದ್ದು ಖಾಸಗಿ ಜಾಗ ಅತಿಕ್ರಮಣವಾಗುವುದಿಲ್ಲ ಹಾಗೂ ಸ್ಥಳೀಯರಿಗೆ ತೊಂದರೆ ಆಗುವುದಿಲ್ಲ. ಯೋಜನೆಯಿಂದ ಸ್ಥಳೀಯರಿಗೆ ಉದ್ಯೋಗವಕಾಶ ಕೂಡ ಲಭಿಸಲಿದೆ ಎಂದರು.
ಈ ಬಗ್ಗೆ ತಮಗೆ ಲಿಖಿತ ಭರವಸೆ ನೀಡಬೇಕೆಂದು ಗ್ರಾಮಸ್ಥರು ಪಟ್ಟು ಹಿಡಿದಾಗ ಶಾಸಕರು ನಿರಾಕರಿಸಿದರು. ಯೋಜನೆಯ ಬಗ್ಗೆ ತಮಗೆ ಲಿಖಿತ ಮಾಹಿತಿ ನೀಡುವಂತೆ ಗ್ರಾಮಸ್ಥರು ನೀಡಿದ ಮನವಿಯನ್ನು ಸ್ವೀಕರಿಸಿ ಬಳಿಕ ಶಾಸಕರು ಮತ್ತು ಸಚಿವರು ಅಲ್ಲಿಂದ ತೆರಳಿದರು. ಕೊಳತ್ತಾರು ಪದವು ಪರಿಸರದ ಸುಮಾರು 250ಕ್ಕೂ ಮಿಕ್ಕಿ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಈ ಹಿಂದೆ ಇದೇ ಪ್ರದೇಶದಲ್ಲಿ ಬೃಹತ್ ಉಷ್ಣ ವಿದ್ಯುತ್ ಸ್ಥಾವರ ನಿರ್ಮಿಸಲು ಮತ್ತು ಬಾಕ್ಸೈಟ್ ಗಣಿಗಾರಿಕೆಯನ್ನು ನಿರ್ಮಿಸಲು ಉದ್ದೇಶಿಸಲಾಗಿತ್ತು ಆದರೆ ಸ್ಥಳೀಯರು ಈ ಸಂದರ್ಭದಲ್ಲೂ ವಿರೋಧ ವ್ಯಕ್ತಪಡಿಸಿದ್ದರಿಂದ ಈ ಎರಡೂ ಯೋಜನೆಗಳು ಸ್ಥಗಿತಗೊಂಡಿದ್ದವು.

 

Related posts

Leave a Reply

Your email address will not be published. Required fields are marked *