Header Ads
Breaking News

ಪುತ್ತೂರು ವೈಭವಯುತವಾಗಿ ನಡೆದ ಬ್ರಹ್ಮರಥೋತ್ಸವ

ಪುತ್ತೂರು: ಇತಿಹಾಸ ಪ್ರಸಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಬ್ರಹ್ಮರಥೋತ್ಸವವು ಏ.17ರಂದು ಭಕ್ತಿ ಸಂಭ್ರಮದೊಂದಿಗೆ ವೈಭವಯುತವಾಗಿ ನಡೆಯಿತು. ಸರಕಾರದ ಕೋವಿಡ್ ನಿಯಮಕ್ಕೆ ತಕ್ಕಂತೆ ಸೀಮಿತಿ ಭಕ್ತರಿಂದ ಶ್ರೀ ದೇವರ ರಥ ಎಳೆಯಲಾಯಿತು.

ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ನಡೆದ ಬ್ರಹ್ಮರಥೋತ್ಸವದಲ್ಲಿ ಆರಂಭದಲ್ಲಿ ಬ್ರಹ್ಮರಥ ಸೇವೆ ನೀಡಿದ ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್ ಮತ್ತು ಸದಸ್ಯರ ಉಪಸ್ಥಿತಿಯಲ್ಲಿ ಉತ್ಸವಾದಿಗಳು ನಡೆಯಿತು. ಬ್ರಹ್ಮರಥೋತ್ಸವದ ಮೊದಲು ನಡೆದ ಆಕರ್ಷಕ ಸುಡುಮದ್ದು ಪ್ರದರ್ಶನದ ’ಪುತ್ತೂರು ಬೆಡಿ’ ಸಂಪ್ರದಾಯಕ್ಕೆ ತಕ್ಕಂತೆ ಪ್ರದರ್ಶನ ನಡೆಯಿತು. ಈ ಭಾರಿ ಕೋವಿಡ್ ನಿಯಮಾನುಸಾರ ಸಂಪ್ರದಾಯಕ್ಕೆ ಚ್ಯುತಿ ಭಾರದಂತೆ 1.50 ಲಕ್ಷ ವೆಚ್ಚದ ಸುಡುಮದ್ದು ಪ್ರದರ್ಶನ ನಡೆಯಿತು.


ಏ.೧೭ರಂದು ಬೆಳಿಗ್ಗೆ ದೇವಸ್ಥಾನದಲ್ಲಿ ಉತ್ಸವ, ಕಟ್ಟೆಪೂಜೆ, ಮಧ್ಯಾಹ್ನ ದರ್ಶನ ಬಲಿ, ಬಟ್ಟಲು ಕಾಣಿಕೆ ನಡೆಯಿತು. ಸಂಜೆ ದೇವರ ಮತ್ತು ಉಳ್ಳಾಲ್ತಿ ಅಮ್ಮನವರ ಉತ್ಸವ ನಡೆಯಿತು. ಬಳಿಕ ಬ್ರಹ್ಮರಥದ ಬಳಿ ಕಾಜುಕುಜುಂಬ ದೈವದ ನುಡಿಗಟ್ಟು ನಡೆದು ದೇವರು ರಥಾರೂಢರಾದರು. ಬಳಿಕ ಪುತ್ತೂರು ಬೆಡಿ ಆರಂಭವಾಯಿತು. ಸುಮಾರು 1 ಗಂಟೆ ಕಾಲ ಸುಡುಮದ್ದು ಪ್ರದರ್ಶನ ನಡೆದು ರಾತ್ರಿ ಗಂಟೆ 9.45ಕ್ಕೆ ವೇಳೆ ಬ್ರಹ್ಮರಥದ ಮುಂದೆ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್, ಸದಸ್ಯರಾದ ಡಾ. ಸುಧಾ ಎಸ್ ರಾವ್, ವೀಣಾ ಬಿ.ಕೆ. ರಾಮಚಂದ್ರ ಕಾಮತ್, ರಾಮ್‌ದಾಸ್ ಗೌಡ, ಶೇಖರ್ ನಾರಾವಿ, ಬಿ.ಐತ್ತಪ್ಪ ನಾಯ್ಕ್, ರವೀಂದ್ರನಾಥ ರೈ ಬಳ್ಳಮಜಲು, ದೇವಳದ ಮಾಜಿ ಆಡಳಿತ ಮೊಕ್ತೇಸರ ಎನ್.ಕೆ. ಜಗನ್ನಿವಾಸ ರಾವ್, ಅವರು ತೆಂಗಿನ ಕಾಯಿ ಒಡೆದರು. ಬಳಿಕ ಬ್ರಹ್ಮರಥೋತ್ಸವ ನಡೆಯಿತು.

ಜಾತ್ರೋತ್ಸವದ ವೇಳೆ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಪೊಲೀಸರು ಬಿಗು ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.ಜಾತ್ರಾ ಗದ್ದೆಯಲ್ಲಿ ಪೊಲೀಸ್ ಮಾಹಿತಿ ಕೇಂದ್ರದ ವ್ಯವಸ್ಥೆಯನ್ನೂ ಮಾಡಲಾಗಿತ್ತು. ದೇವಳದ ವತಿಯಿಂದಲೇ ಪ್ರಾರಂಭಿಸಲಾಗಿದ್ದ ಮಾಜಿ ಪುರಸಭೆ ಅಧ್ಯಕ್ಷ ರಾಜೇಶ್ ಬನ್ನೂರು ಅವರ ನೇತೃತ್ವದಲ್ಲಿ ಮಾಹಿತಿ ಕೇಂದ್ರದ ಮೂಲಕ ಭಕ್ತಾದಿಗಳಿಗೆ ವಿವಿಧ ಮಾಹಿತಿಯನ್ನು ಕ್ಷಣಕ್ಷಣಕ್ಕೂ ನೀಡಲಾಗುತ್ತಿತ್ತು.

ದೇವಳದ ನಿತ್ಯ ಕರಸೇವಕರು ಸೇರಿದಂತೆ ಸ್ವಯಂ ಪ್ರೇರಿತರಾಗಿ ನೂರಕ್ಕೂ ಅಧಿಕ ಸ್ವಯಂ ಸೇವಕರು ವಾಹನ ಸಂಚಾರ ನಿಯಂತ್ರಣ, ಭಕ್ತಾದಿಗಳಿಗೆ ಮಾರ್ಗದರ್ಶನ, ಭಕ್ತರ ಸಂಖ್ಯೆಯನ್ನು ಉತ್ಸವದ ಸಂದರ್ಭ ನಿಯಂತ್ರಿಸಲು ಮತ್ತು ಅನ್ನಪ್ರಸಾದ ಬಡಿಸುವ ವ್ಯವಸ್ಥೆಯಲ್ಲೂ ಸಹಕರಿಸಿದರು. 50 ಮಂದಿ ನಿತ್ಯ ಕರಸೇವಕರು ವಿವಿಧ ಜವಾಬ್ದಾರಿಯುತ ಕೆಲಸ ನಿರ್ವಹಿಸಿದರು. ಹಲವಾರು ಸಂಘ ಸಂಸ್ಥೆಗಳು ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸಿದರು.

 

Related posts

Leave a Reply

Your email address will not be published. Required fields are marked *