Header Ads
Breaking News

ಪ್ಲಾಸ್ಟಿಕ್ ಹೊದಿಕೆಯಲ್ಲಿರುವ ಮನೆ, ಕುಸಿದು ಬೀಳುವ ಆತಂಕ:ನೆರವಿನ ನಿರೀಕ್ಷೆಯಲ್ಲಿ ಪುತ್ತೂರಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ದೀಕ್ಷಾ ಕುಟುಂಬ

ಪುತ್ತೂರು: ರಾಜ್ಯ ಶಿಕ್ಷಣ ಸಚಿವ ರಾಜ್ಯದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಘೋಷಣೆ ಮಾಡಿದ ದಿನವೇ ವಿದ್ಯಾರ್ಥಿನಿಯೊಬ್ಬಳಿಗೆ ಆತಂಕ ಹೆಚ್ಚಾಗಿದೆ. ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಸುರಿದ ಮಳೆಗೆ ವಿದ್ಯಾರ್ಥಿನಿಯ ಮನೆಯ ಒಂದು ಪಾರ್ಶ್ವ ಧರೆಗುರುಳಿದೆ. ಇದರಿಂದಾಗಿ ಇನ್ನು ಯಾವ ಸೂರಿನಡಿ ಕುಳಿತು ಪರೀಕ್ಷೆಗೆ ತಯಾರಿ ಮಾಡುವುದು ಎನ್ನುವ ಆತಂಕ ಈ ವಿದ್ಯಾರ್ಥಿನಿಯನ್ನು ಕಾಡುತ್ತಿದೆ. ಮನೆಯ ಇನ್ನೊಂದು ಪಾರ್ಶ್ವವೂ ಬೀಳುವ ಹಂತದಲ್ಲಿದ್ದು, ಪರೀಕ್ಷೆ ಬರೆಯೋದು, ಮನೆ ಉಳಿಸೋದೋ ಎನ್ನುವ ಗೊಂದಲ ಈ ವಿದ್ಯಾರ್ಥಿನಿಯದ್ದಾಗಿದೆ.

ರಾಜ್ಯದಲ್ಲಿ ಕೊರೊನಾ ಸಂಕಷ್ಟದ ನಡುವೆಯೇ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವುದು ಅನಿವಾರ್ಯವಾಗಿದೆ. ಈ ಹಿನ್ನಲೆಯಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ರಾಜ್ಯದಲ್ಲಿ ಜುಲೈ 19 ರಿಂದ 22 ರ ತನಕ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ನಡೆಯಲಿದೆ ಎಂದು ದಿನಾಂಕವನ್ನೂ ಪ್ರಕಟಿಸಿದ್ದಾರೆ.

ಆದರೆ ಪರೀಕ್ಷೆ ಬರೆಯುವ ಸಂದರ್ಭದಲ್ಲೇ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬನ್ನೂರು ಗ್ರಾಮಪಂಚಾಯತ್ ವ್ಯಾಪ್ತಿಯ ಕುಂಬುರ್ಗ ಎಂಬಲ್ಲಿನ ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯೋದೋ, ಮನೆ ಉಳಿಸೋದೋ ಎನ್ನುವ ಗೊಂದಲವಿದೆ. ಪುತ್ತೂರು ಭಾಗದಲ್ಲಿ ಸುರಿದ ಭಾರೀ ಮಳೆಯಿಂದಾಗಿ ವಿದ್ಯಾರ್ಥಿನಿ ದೀಕ್ಷಾ ಮನೆಯ ಒಂದು ಪಾರ್ಶ್ವ ಸಂಪೂರ್ಣ ಕುಸಿದಿದೆ. ಪ್ಲಾಸ್ಟಿಕ್ ಹೊದಿಕೆಯಲ್ಲಿರುವ ಈ ಮನೆಯ ಮೇಲ್ಫಾವಣಿಯೂ ಇಂದೋ, ನಾಳೆಯೋ ಕುಸಿಯುವ ಭೀತಿಯಲ್ಲಿದೆ.

ಆದರೆ ಕುಸಿದ ಮನೆಯನ್ನು ದುರಸ್ತಿ ಮಾಡಲೂ ಹಣವಿಲ್ಲದ ದೀಕ್ಷಾ ಕುಟುಂಬವಿದೆ. ದೀಕ್ಷಾ ತಂದೆ ದುಡಿಯುವ ಶಕ್ತಿ ಕಳೆದುಕೊಂಡಿದ್ದು, ತಾಯಿ ಮನೆಯಲ್ಲಿ ಬೀಡಿ ಕಟ್ಟಿ ಮನೆ ಮಂದಿಯನ್ನು ಸಾಕುತ್ತಿದ್ದಾರೆ. ದೀಕ್ಷಾಳಿಗೆ ಎಂಟನೇ ತರಗತಿಯಲ್ಲಿ ಕಲಿಯುತ್ತಿರುವ ಸಹೋದರನೂ ಇದ್ದು, ಆತನ ವಿದ್ಯಾಭ್ಯಾಸದ ಹೊಣೆಯೂ ಬಡ ತಾಯಿಯ ಮೇಲಿದೆ. ದೀಕ್ಷಾ ಮನೆ ಪರಿಸ್ಥಿತಿ ಸರಿಯಿಲ್ಲದ ಕಾರಣ, ದೂರದ ತನ್ನ ಮಾವನ ಮನೆಯಲ್ಲಿ ಉಳಿದುಕೊಂಡಿದ್ದಾಳೆ. ಆದರೆ ಇದೀಗ ತವರಿಗೆ ಬಂದು ಎಸ್.ಎಸ್.ಎಲ್.ಸಿ ಪರೀಕ್ಷೆಯ ತಯಾರಿಯಲ್ಲಿ ತೊಡಗಿಕೊಂಡಿದ್ದು, ಮನೆಯೇ ಬಿದ್ದು ಹೋದ ಮೇಲೆ ಇನ್ನು ಪರೀಕ್ಷೆಗೆ ತಯಾರಿ ಮಾಡಿಕೊಳ್ಳುವುದಾದರೂ ಎಲ್ಲಿ ಎನ್ನುವ ಗೊಂದಲದಲ್ಲಿದ್ದಾಳೆ. ಮನೆಯ ಪರಿಸ್ಥಿತಿ ಈ ರೀತಿ ಇರುವಾಗ ಹೇಗೆ ಪರೀಕ್ಷೆ ಬರೆಯಲಿ ಎನ್ನುವ ನಿರಾಶೆಯಲ್ಲಿರುವ ದೀಕ್ಷಾ ಸಮಾಜದಲ್ಲಿ ನೆರವಿಗಾಗಿ ಅಂಗಲಾಚುತ್ತಿದ್ದಾಳೆ.


ಅರ್ಧ ಬಿದ್ದ ಮನೆಯ ಮುಂದೆ ನಿಂತು ಮನೆಗೆ ಭೇಟಿ ನೀಡುವವರಲ್ಲಿ ತನ್ನ ಸಂಕಷ್ಟವನ್ನು ದೀಕ್ಷಾ ತೋಡಿಕೊಳ್ಳುತ್ತಿದ್ದಾಳೆ. ಮಳೆಗೆ ಬಿದ್ದ ಮನೆಯಲ್ಲಿ ವಾಸಿಸೋದು ಸುರಕ್ಷಿತವಲ್ಲ ಎನ್ನುವ ಕಾರಣಕ್ಕೆ ಇದೀಗ ಬನ್ನೂರು ಗ್ರಾಮ ಪಂಚಾಯತ್ ನ ಅಧ್ಯಕ್ಷೆ ಹಾಗೂ ತಂಡ ದೀಕ್ಷಾ ಹಾಗೂ ಆಕೆಯ ಮನೆಯವರನ್ನು ಗ್ರಾಮಪಂಚಾಯತ್ ನ ಸಭಾಭವನಕ್ಕೆ ತಾತ್ಕಾಲಿಕವಾಗಿ ಶಿಫ್ಟ್ ಮಾಡಿದೆ.ಅಲ್ಲದೆ ಪಂಚಾಯತ್ ಮೂಲಕ ಮನೆಯ ತಾತ್ಕಾಲಿಕ ದುರಸ್ತಿಗೆ ಕ್ರಮ ಕೈಗೊಳ್ಳುವ ಭರವಸೆಯನ್ನೂ ನೀಡಿದೆ. ಗ್ರಾಮಸ್ಥರೂ ಮನೆಯ ದುರಸ್ತಿಗೆ ಸಹಾಯ ಮಾಡುವ ಆಶ್ವಾಸನೆಯನ್ನೂ ನೀಡಿದ್ದಾರೆ.

ತಲೆ ತುಂಬಾ ಮನೆಯ ಸಮಸ್ಯೆಯನ್ನೇ ತುಂಬಿಕೊಂಡಿರುವ ದೀಕ್ಷಾಳ ಪರೀಕ್ಷೆ ಬರೆಯುವಂತಾಗಲು ಸರಕಾರ ನೆರವಿಗೆ ನಿಲ್ಲಬೇಕಿದೆ. ಕೊರೊನಾ ಸಂಕಷ್ಟದ ನಡುವೆ ಪ್ರಾಕೃತಿಕ ವಿಕೋಪವೂ ದೀಕ್ಷಾಳ ಕುಟುಂಬಕ್ಕೆ ಭಾರೀ ಹೊಡೆತವನ್ನು ನೀಡಿದ್ದು, ಈ ಬಡ ಕುಟುಂಬಕ್ಕೆ ಸಹಾಯದ ಅಗತ್ಯವೂ ಇದೆ. ಸಹಾಯ ಮಾಡಲು ಇಚ್ಛಿಸುವ ದಾನಿಗಳು:

ಖಾತೆದಾರನ ಹೆಸರು ವಿಕಾಸ್ ಶೆಟ್ಟಿ
ಬ್ಯಾಂಕ್ ಆಫ್ ಬರೋಡಾ, ಪುತ್ತೂರು ಮೈನ್
ಖಾತೆ ಸಂಖ್ಯೆ: 83740100012736

IFSC CODE: BARBO BANK OF BARODA

ಇದಕ್ಕೆ ಸಹಾಯಧನವನ್ನು ನೀಡಿ ಬಡ ವಿದ್ಯಾರ್ಥಿನಿಯ ಬಾಳಿನಲ್ಲಿ ಹೊಸ ಬೆಳಕನ್ನು ಮೂಡಿಸಲು ನೆರವಾಗಬೇಕಾಗಿದೆ.

 

Related posts

Leave a Reply

Your email address will not be published. Required fields are marked *