Header Ads
Breaking News

ಮೀನುಗಾರರ ಬೇಡಿಕೆ ಹೇಳಲು ಸಮಯ ಕೊಡದ ಆರ್.ಅಶೋಕ್

ಕುಂದಾಪುರ: ತೌಕ್ತೆ ಚಂಡಮಾರುತದಿಂದಾಗಿ ಶೆಡ್, ರಸ್ತೆ, ತೆಂಗಿನಮರಗಳನ್ನೆಲ್ಲಾ ಕಳೆದುಕೊಂಡಿದ್ದೇವೆ. ಇಲ್ಲಿನ ಮೀನುಗಾರರ ಜ್ವಲಂತ ಸಮಸ್ಯೆಗಳ ಕುರಿತು ಸಚಿವರು ಪರಿಶೀಲನೆ ನಡೆಸದೆ ತರಾತುರಿಯಲ್ಲಿ ವಾಪಾಸಾಗಿದ್ದಾರೆ. ಕಡಲ್ಕೊರೆತ ಪ್ರದೇಶಗಳಿಗೆ ಭೇಟಿ ನೀಡಿ ಫೋಟೊಗೆ ಪೋಸ್ ಕೊಟ್ಟು ಹೋಗುವುದಲ್ಲ. ಇವರೇನು ಮೀನುಗಾರರ ಸಮಸ್ಯೆಗಳನ್ನು ಆಲಿಸಲು ಬಂದಿದ್ದಾ ಅಥವಾ ಶೋಕಿ ಮಾಡಲು ಬಂದಿದ್ದಾ ಎಂದು ಕಂದಾಯ ಸಚಿವ ಆರ್ ಅಶೋಕ್ ವಿರುದ್ದ ಮೀನುಗಾರರು ಕಿಡಿಕಾರಿದ್ದಾರೆ.

ಕಂದಾಯ ಸಚಿವ ಆರ್ ಅಶೋಕ್ ಇಲ್ಲಿನ ಮರವಂತೆಯ ಕಡಲ್ಕೊರೆತ ಪ್ರದೇಶಗಳಿಗೆ ಶಾಸಕ ಬಿಎಮ್ ಸುಕುಮಾರ್ ಶೆಟ್ಟಿಯವರ ಜೊತೆ ಭೇಟಿ ನೀಡಿ ತರಾತುರಿಯಲ್ಲಿ ತೆರಳಿದ ಬಳಿಕ ಮಾಧ್ಯಮಗಳ ಮುಂದೆ ಸಚಿವರ ಬೇಜವಾಬ್ದಾರಿ ನಡೆಯ ಕುರಿತು ಮೀನುಗಾರರು ಆಕ್ರೋಶ ವ್ಯಕ್ತಪಡಿಸಿದರು. ತೌಕ್ತೆ ಚಂಡಮಾರುತದಿಂದಾಗಿ ನಮ್ಮ ಭೂಮಿ ಕಡಲು ಆವರಿಸಿಕೊಂಡಿದೆ. ನಮಗೆ ವರದಾನವಾಗಿದ್ದ ತೆಂಗಿನ ಮರಗಳು ಕಡಲು ಸೇರಿಕೊಂಡಿವೆ. ಶೆಡ್ ಹಾಗೂ ನಮ್ಮ ಜೀವನಾಡಿಯಾಗಿದ್ದ ರಸ್ತೆಗಳು ಸಂಪೂರ್ಣ ಹಾನಿಯಾಗಿವೆ. ಇಷ್ಟೆಲ್ಲಾ ಕಳೆದುಕೊಂಡರೂ ಕೂಡ ನಮಗೆ ಕಿಂಚಿತ್ ಸಾಂತ್ವಾನ ಹೇಳುವ ಸೌಜನ್ಯತೆ ಸಚಿವರಿಗಿಲ್ಲ. ನಮ್ಮ ಬೇಡಿಕೆಗಳನ್ನು ಆಲಿಸಿದೆ ನಮ್ಮ ಜೊತೆ ಚರ್ಚಿಸದೆ ಹಾಗೆಯೇ ವಾಪಾಸಾಗಿದ್ದಾರೆ. ಕೇವಲ ಭೇಟಿ ನೀಡಿ ಫೋಟೊ ಕ್ಲಿಕ್ಕಿಸಿಕೊಂಡು ಹೋದರೆ ನಮ್ಮ ಸಮಸ್ಯೆಗಳಿಗೆ ಮುಕ್ತಿ ಸಿಗುತ್ತದಾ ಎಂದು ಪ್ರಶ್ನಿಸಿದ್ದಾರೆ.

ನಮ್ಮೆಲ್ಲ ಮನೆಗಳು ಸಮುದ್ರ ಪಾಲಾಗುತ್ತದೆಂದು ಹೆದರಿ ನಾವೆಲ್ಲರೂ ಜೊತೆಯಾಗಿ ಸುರಿಯುವ ಮಳೆಯಲ್ಲೇ ಮರಳಿನ ಚೀಲಗಳನ್ನು ತಡೆಗೋಡೆಯಾಗಿ ಮಾಡಿಕೊಂಡಿದ್ದೇವೆ. ನಮ್ಮ ಕುಟುಂಬಗಳ ರಕ್ಷಣೆಗಾಗಿ ಕೆಲಸ ಮಾಡುವುದು ನಾವು. ಫೋಟೋಗೆ ಪೋಸ್ ಕೊಡುವುದು ಇವರು. ಹೀಗಾಗಿ ಮುಂದೆ ಯಾವುದೇ ಜನಪ್ರತಿನಿಧಿಗಳು ಮರವಂತೆ ಕಡಲ್ಕೊರೆತ ಪ್ರದೇಶಗಳಿಗೆ ಭೇಟಿ ನೀಡಿದರೆ ನಾವ್ಯಾರು ಬರುವುದಿಲ್ಲ ಎಂದು ಮೀನುಗಾರರ ಮುಖಂಡರು ಅಸಮಧಾನ ಹೊರಹಾಕಿದರು.

Related posts

Leave a Reply

Your email address will not be published. Required fields are marked *