Header Ads
Breaking News

ಮೂಡುಬಿದರೆಯಲ್ಲಿ ಬಿಗಿ ಲಾಕ್‍ಡೌನ್

ವಾರಾಂತ್ಯದ  ಕರ್ಪ್ಯೂ ಮುಗಿದು ಸರಕಾರ ಘೋಷಿಸಿರುವ 14 ದಿನಗಳ ಬಿಗಿ ಲಾಕ್‍ಡೌನ್ ಸೋಮವಾರದಿಂದ ಜಾರಿಯಾಗಿದ್ದು ಅದರ ಪ್ರಕಾರ ಬೆಳಿಗ್ಗೆ 6ರಿಂದ 9ರವರೆಗೆ ಅವಶ್ಯಕ ವಸ್ತುಗಳ ಖರೀದಿಗೆ ಅವಕಾಶವಿದ್ದು ವಾಹನಗಳನ್ನು ಬಳಸದೆ ನಡೆದುಕೊಂಡೇ ಹೋಗಿ ತರಬಹುದು ಎಂಬ ಕಾನೂನು ಇದ್ದರೂ ಮೂಡುಬಿದಿರೆಯಲ್ಲಿ ಹೆಚ್ಚಿನವರು ತಮ್ಮ ವಾಹನಗಳಲ್ಲಿಯೇ ಬಂದು ವಸ್ತುಗಳನ್ನು ಖರೀದಿಸಿಕೊಂಡು ಹೋಗುತ್ತಿರುವುದು ಕಂಡು ಬಂತು. ಆದರೆ 10 ಗಂಟೆಯ ನಂತರ ಅನಗತ್ಯವಾಗಿ ವಾಹನಗಳು ಸಂಚರಿಸುತ್ತಿದ್ದುದಕ್ಕೆ ಮೂಡುಬಿದಿರೆ ಪೊಲೀಸ್ ನಿರೀಕ್ಷಕ ದಿನೇಶ್ ಕುಮಾರ್ ನೇತೃತ್ವದ ತಂಡವು ಕಟ್ಟುನಿಟ್ಟಿನ ತಪಾಸಣೆ ನಡೆಸಿ ಹಲವು ವಾಹನಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.

ವಾರಾಂತ್ಯ  ಕರ್ಪ್ಯೂ ಹಿನ್ನಲೆಯಲ್ಲಿ ಎರಡು ದಿನ ಬಂದ್ ಇದ್ದ ಕಾರಣ ದಿನಸಿ ಸಾಮಾಗ್ರಿಗಳಿಗೆ ಗ್ರಾಹಕರು ಮುಗಿ ಬಿದ್ದಿದ್ದು, ಎಲ್ಲಾ ಅಂಗಡಿಗಳು ಗ್ರಾಹಕರಿಂದ ತುಂಬಿದ್ದವು. ಇತ್ತ ವ್ಯಾಪಾರಕ್ಕೆ ನಿಗದಿ ಪಡಿಸಿದ ಅವಧಿ ಮುಗಿಯುತ್ತಲೇ ವ್ಯಾಪಾರಿಗಳು ಬಾಗಿಲು ಮುಚ್ಚಲು ಯತ್ನಿಸಿದರೂ ಗ್ರಾಹಕರು ಕದಡಲಿಲ್ಲ. 10 ಗಂಟೆಯ ಬಳಿಕ ಪೊಲೀಸರು ಧ್ವನಿವರ್ಧಕದ ಮೂಲಕ ಎಚ್ಚರಿಕೆ ನೀಡಿದ ನಂತರ ಕೆಲವು ಅಂಗಡಿ ಮಾಲಕರುಗಳು ಬಾಗಿಲುಗಳನ್ನು ಮುಚ್ಚಿದರು. ನಂತರ ನಿಯಮ ಮೀರಿ ಬಂದ ಎಲ್ಲಾ ವಾಹನಗಳನ್ನು ಬ್ಯಾರಿಕೇಟ್ ಮೂಲಕ ತಡೆ ಹಿಡಿದು ನಿಯಮ ಉಲ್ಲಂಘಿಸಿದ ವಾಹನಗಳನ್ನು ಮುಟ್ಟುಗೋಲು ಹಾಕಿ ಪ್ರಕರಣ ದಾಖಲಿಸಿದ್ದಾರೆ.

ವಾಹನಗಳನ್ನು ಮುಟ್ಟುಗೋಲು ಹಾಕಿದ ಸಂದರ್ಭದಲ್ಲಿ ಕೆಲವು ವಾಹನದ ಮಾಲಕರುಗಳು ಬೇರೆ ಬೇರೆ ರೀತಿಯ ಸಬೂಬುಗಳನ್ನು ನೀಡಿ ಜಾರಿಕೊಳ್ಳಲು ಯತ್ನಿಸಿದರೂ ಇದಕ್ಕೆ ಪೊಲೀಸರು ಅವಕಾಶ ನೀಡಲಿಲ್ಲ. ಮಾಸ್ಕ್, ಹೆಲ್ಮೆಟ್ ಹಾಗೂ ಸಮವಸ್ತ್ರ ಧರಿಸದೆ ಇರುವ ವಾಹನ ಚಾಲಕರುಗಳಿಗೆ ಈ ಸಂದರ್ಭದಲ್ಲಿ ದಂಡವನ್ನೂ ಹಾಕಿದ್ದಾರೆ. ಅಗತ್ಯ ವಸ್ತುಗಳನ್ನು ಖರೀದಿಸಿ ಸಮಯಮೀರಿ ಬಂದವರಿಗೂ ಮಾತಿನ ಎಚ್ಚರಿಕೆಯನ್ನು ನೀಡಿದ್ದರಲ್ಲದೆ ನಡೆದುಕೊಂಡೇ ಹೋಗಬೇಕೆಂದು ಎಚ್ಚರಿಸಿದರು.
ಮೆಡಿಕಲ್, ಆಸ್ಪತ್ರೆ, ಕೊರಿಯರ್, ಆಹಾರ ವಸ್ತುಗಳ ಸಾಗಾಟದ ವಾಹನಗಳಿಗೆ ಸಂಚರಿಸಲು ಅವಕಾಶ ನೀಡಲಾಗಿತ್ತು. ಅವಶ್ಯಕ ಸೇವೆಯಡಿ ಬರುವ ಮುದ್ರಣ-ದೃಶ್ಯ ಮಾಧ್ಯಮ ಸಿಬಂದಿಗಳ ಸಂಚಾರ, ದಿನಪತ್ರಿಕೆ ಸರಬರಾಜು ಹಾಗೂ ವಿತರಕರಿಗೆ ಅವಕಾಶವಿತ್ತು.

 

Related posts

Leave a Reply

Your email address will not be published. Required fields are marked *